ಸಂಶೋಧನೆ ಉತ್ತೇಜನಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶ ಸ್ಥಾಪಿಸಿದ ಬೆಂಗಳೂರು ವಿವಿ

| Published : Jan 06 2025, 02:01 AM IST

ಸಾರಾಂಶ

ಸಂಶೋಧನೆ ಮತ್ತು ಅಧ್ಯಯನಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಬೆಂಗಳೂರು ವಿಶ್ವವಿದ್ಯಾಲಯ ಬೌಧ್ಧಿಕ ಆಸ್ತಿ ಹಕ್ಕುಗಳ ಕೋಶವನ್ನು ಸ್ಥಾಪಿಸಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅಧಿಕಾರಿಗಳೊಂದಿಗೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಶೋಧನೆ ಮತ್ತು ಅಧ್ಯಯನಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಬೆಂಗಳೂರು ವಿಶ್ವವಿದ್ಯಾಲಯ ಬೌಧ್ಧಿಕ ಆಸ್ತಿ ಹಕ್ಕುಗಳ ಕೋಶವನ್ನು ಸ್ಥಾಪಿಸಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅಧಿಕಾರಿಗಳೊಂದಿಗೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಬೆಂಗಳೂರು ವಿವಿಯಲ್ಲಿ ವಿಜ್ಞಾನ, ತಂತ್ರಜ್ಞಾನ, ಭೂಗೋಳ, ಸಮಾಜ ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದು ಅನೇಕ ಸಂಶೋಧಕರು ತಮ್ಮ‌ ಆವಿಷ್ಕಾರಗಳ, ಆಲೋಚನೆಗಳಿಗೆ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಂದಾಜು 70 ಕ್ಕೂ ಅಧಿಕ ಪೇಟೆಂಟ್‌ಗಳು ಕಳೆದ ಐದು ವರ್ಷಗಳಲ್ಲಿ ದಾಖಲಾಗಿದ್ದು ಈ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ವಿವಿ ಹೊಂದಿದೆ. ಶೈಕ್ಷಣಿಕ ಸಂಶೋಧನೆ ಮತ್ತು ಅಧ್ಯಯನಗಳಿಗೆ ಉತ್ತೇಜನ ನೀಡುವ ಜೊತೆಗೆ, ಅವುಗಳನ್ನು ಸಂರಕ್ಷಿಸುವುದು ಕೂಡ ಈ ಕೋಶ ಸ್ಥಾಪನೆಯ ಉದ್ದೇಶವಾಗಿದೆ ಎಂದು ವಿವಿಯ ಕುಲಪತಿ ಡಾ। ಎಸ್‌.ಎಂ.ಜಯಕರ ತಿಳಿಸಿದ್ದಾರೆ.

ಈ ಕೋಶದಡಿ ವಿವಿಯ ವಿದ್ಯಾರ್ಥಿಗಳು,ಸಂಶೋಧಕರು, ಪ್ರಾಧ್ಯಾಪಕರಿಗೆ ತಮ್ಮ ಆವಿಷ್ಕಾರ, ಸಂಶೋಧನೆಗಳನ್ನು ರಕ್ಷಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೊಸ ಆವಿಷ್ಕಾರ, ಸಂಶೋಧನೆಗೆ ಪೇಟೆಂಟ್, ಹಕ್ಕುಸ್ವಾಮ್ಯ(ಕಾಪಿರೈಟ್), ಟ್ರೇಡ್ ಸೀಕ್ರೆಟ್ಸ್, ಟ್ರೇಡ್ ಮಾರ್ಕ್ ಪಡೆಯಲು ಸಹಕಾರ ನೀಡಲಾಗುವುದು. ಸರ್ಕಾರಿ ನವೀಕರಣ ಶುಲ್ಕವನ್ನು ಕೋಶದಿಂದಲೇ ಭರಿಸಲಾಗುವುದು ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಶೋಧನೆ, ಪ್ರಯೋಗ, ಅನ್ವೇಷಣೆ, ಅಧ್ಯಯನಗಳನ್ನು ರಕ್ಷಿಸದಿದ್ದರೆ ಅದರ ಶ್ರಮದ ಫಲ ಯಾರಿಗೂ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಐಪಿಆರ್ ಕೋಶ ಸ್ಥಾಪಿಸಲಾಗಿದ್ದು ಭವಿಷ್ಯದಲ್ಲಿ ಬೆಂ.ವಿ.ವಿ ದೊಡ್ಡ ಮಟ್ಟದ ಕೊಡುಗೆ ನೀಡುವ ವಿಶ್ವಾಸ ಹೊಂದಿದೆ ಎಂದು ಬೌದ್ಧಿಕ ಆಸ್ತಿ ಹಕ್ಕು ಕೋಶದ ಸಂಯೋಜಕ ಪ್ರೊ. ಜಿ.ಕೃಷ್ಣಮೂರ್ತಿ ಹೇಳಿದ್ದಾರೆ.