ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಈವರೆಗೆ ಅನಧಿಕೃವಾಗಿ ಚಾಲ್ತಿಯಲ್ಲಿದ್ದ ಬೆಂಗಳೂರಿನ ನೈಟ್‌ಲೈಫ್‌ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದ್ದು, ಹೋಟೆಲ್, ಮಾರುಕಟ್ಟೆಗಳ ಜತೆಗೆ ಇದೀಗ ಮಧ್ಯರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಆದೇಶಿಸಲಾಗಿದೆ.ಬೆಂಗಳೂರಿನಲ್ಲಿ ರಾತ್ರಿ ವೇಳೆಯಲ್ಲೂ ವ್ಯಾಪಾರ-ವಹಿವಾಟು ಹೆಚ್ಚಿಸುವ ಉದ್ದೇಶದೊಂದಿಗೆ 2016ರಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಮೊದಲಿಗೆ ವಾರಾಂತ್ಯದ ಎರಡು ದಿನಗಳು ಮಾತ್ರ ಅದಕ್ಕೆ ಅವಕಾಶ ನೀಡಲಾಗಿತ್ತಾದರೂ, ಜನರ ಬೇಡಿಕೆ ಹೆಚ್ಚಾದ ಕಾರಣದಿಂದಾಗಿ ವಾರದ ಏಳೂ ದಿನವೂ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಆದರೆ, ವ್ಯಾಪಾರಿಗಳು ಸರ್ಕಾರದ ಆದೇಶದಂತೆ ಮಧ್ಯರಾತ್ರಿವರೆಗೆ ವ್ಯಾಪಾರ ಮಾಡಲು ಸ್ಥಳೀಯ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿ ರಾತ್ರಿ 11ರ ವೇಳೆಗೆ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತಿವೆ.
ಬಜೆಟ್‌ನಲ್ಲಿಯೇ ಘೋಷಿಸಿದ್ದ ಸಿಎಂ:ಬೆಂಗಳೂರಿನ ನೈಟ್‌ಲೈಫ್ ಕುರಿತಂತೆ ಕಳೆದ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿಯೇ ಉಲ್ಲೇಖಿಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಬೆಂಗಳೂರಿನ ನೈಟ್‌ಲೈಫ್ ಹೊಸರೂಪದಲ್ಲಿ ಚಾಲನೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್‌ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು.
ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಹೋಟೆಲ್, ಪಬ್, ಕ್ಲಬ್, ಬಾರ್‌ಗಳೂ ಮಧ್ಯರಾತ್ರಿ 1 ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ. ಆಮೂಲಕ ಈವರೆಗೆ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತಿದ್ದ ಮದ್ಯ ಮಾರಾಟ ಹೋಟೆಲ್, ಕ್ಲಬ್, ಬಾರ್‌ಗಳು ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ಮಾಡಬಹುದಾಗಿದೆ.ಬೆಳಗ್ಗೆ 10ರಿಂದ ಬಾರ್ ಓಪನ್
ಕ್ಲಬ್‌ಗಳು (ಸಿಎಲ್ 4 ಪರವಾನಗಿ) ಸ್ಟಾರ್ ಹೊಟೇಲ್‌ಗಳು(ಸಿಎಲ್ 6) ಹಾಗೂ ಸಿಎಲ್ 7 ಮತ್ತು ಸಿಎಲ್7ಡಿ ಪರವಾನಗಿಯಿರುವ ಹೋಟೆಲ್ ಮತ್ತು ಲಾಡ್ಜ್‌ಗಳು ಬೆಳಗ್ಗೆ 9ರಿಂದ ಮಧ್ಯರಾತ್ರಿ 1ರವರೆಗೆ ಹಾಗೂ ಸಿಎಲ್ 9 ಪರವಾನಗಿ ಹೊಂದಿದ ರಿಫ್ರೆಷ್‌ಮೆಂಟ್ ರೂಂ (ಬಾರ್)ಗಳು ಬೆಳಗ್ಗೆ 10ರಿಂದ ರಾತ್ರಿ 1ರವರೆಗೆ ವಹಿವಾಟು ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.