ಬಂಗಾರಪೇಟೆ ಪುರಸಭೆಗಿಲ್ಲ ಅಧ್ಯಕ್ಷ, ಉಪಾಧ್ಯಕ್ಷ

| Published : Feb 09 2024, 01:47 AM IST

ಸಾರಾಂಶ

ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಇದ್ದರೂ ಅವರು ಒಮ್ಮೆಯೂ ಪುರಸಭೆ ಕಡೆ ಮುಖ ಮಾಡದ ಕಾರಣ ಪುರಸಭೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ ಮುಗಿದು ವರ್ಷ ಕಳೆದರೂ ಎರಡನೇ ಅವಧಿಗೆ ಮತ್ತೆ ಮೀಸಲಾತಿ ನಿಗದಿಪಡಿಸಲು ಸರ್ಕಾರ ಇರುವ ಅಡೆತಡೆಗಳನ್ನು ನಿವಾರಿಸದೆ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಪುರಸಭೆ ಅನಾಥವಾಗಿದೆ.

ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಆಡಳಿತಾಧಿಕಾರಿಯಾಗಿ ತಹಸೀಲ್ದಾರ್ ಇದ್ದರೂ ಅವರು ಒಮ್ಮೆಯೂ ಪುರಸಭೆ ಕಡೆ ಮುಖ ಮಾಡದ ಕಾರಣ ಪುರಸಭೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ.

ಆಡಳಿತಾಧಿಕಾರಿ ಗೈರು

ಪುರಸಭೆಯಲ್ಲಿನ ಅಧಿಕಾರಿಗಳು ಯಾರೂ ಮಾತಿಗೂ ಸ್ಪಂದಿಸುತ್ತಿಲ್ಲದ ಕಾರಣ ಅಧಿಕಾರಿಗಳು ಒಂದು ಕಡೆಯಾದರೆ ಸಿಬ್ಬಂದಿ, ನೌಕರರು ಮತ್ತೊಂದು ದಾರಿ ಹಿಡಿಯುವಂತಾಗಿದೆ. ಇದರಿಂದ ಪಟ್ಟಣದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ರಶ್ಮಿ ಒಮ್ಮೆಯೂ ಪುರಸಭೆಗೆ ಬಂದು ಆಗಬೇಕಿರುವ ಕೆಲಸಗಳ ಬಗ್ಗೆಯಾಗಲಿ ಇಲ್ಲವೆ ಏನು ನಡೆಯಬೇಕಿದೆ ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ.

ಸಾರ್ವಜನಿಕರು ಕಚೇರಿಗೆ ಬಂದು ಸುಮ್ಮನೆ ಬರೀಗೈಲಿ ವಾಪಸ್ ಹೋಗುವಂತಾಗಿದೆ. ಪಟ್ಟಣದ ೨೭ ವಾರ್ಡುಗಳಲ್ಲಿ ಯಾವುದೇ ಕೆಲಸ ಕಾರ‍್ಯಗಳು ಸಾಗುತ್ತಿಲ್ಲ, ವಾರ್ಡಿನ ಸದಸ್ಯರನ್ನು ಕೇಳಿದರೆ ಆಡಳಿತ ಮಂಡಳಿ ಇಲ್ಲದ ಕಾರಣ ನಮ್ಮ ಮಾತಿಗೆ ಪುರಸಭೆಯಲ್ಲಿ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಜನತೆ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತಿಳಿಯದೆ ಅಸಹಾಯಕರಾಗಿದ್ದಾರೆ.

ಪುರಸಭೆ ಸದಸ್ಯರ ಪರದಾಟ

ವಾರ್ಡುಗಳಲ್ಲಿ ತ್ಯಾಜ್ಯಗಳು ಸಮಯಕ್ಕೆ ವಿಲೇವಾರಿಯಾಗುತ್ತಿಲ್ಲ, ಕೆಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆಗಳಿವೆ. ಅದರ ಬಗ್ಗೆ ಯಾರೂ ಅಷ್ಟಾಗಿ ಗಮನಹರಿಸುತ್ತಿಲ್ಲ, ಚರಂಡಿ ದುರಸ್ತಿ ಮಾಡಿಸಿಲ್ಲ, ಬಹುತೇಕ ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳಿಲ್ಲ, ಪರಿಸ್ಥಿತಿ ಹೀಗಿರುವಾಗ ಸದಸ್ಯರಾಗಿ ನಾವು ಏನನ್ನೂ ಮಾಡಲು ಆಗದೆ ವಾರ್ಡುಗಳಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಲೆ ಮರೆಸಿಕೊಂಡು ಓಡಾಡುವಂತಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸದಸ್ಯರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ನಗರೋತ್ಥಾನ ಯೋಜನೆಯಡಿ ಆರಂಭಗೊಂಡ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರನ್ನೂ ಕೈಬಿಡಲಾಗಿದೆ. ಈ ಬಗ್ಗೆ ಪ್ರಶ್ನಿಸಿಲು ಅಧ್ಯಕ್ಷ ಅಥವಾ ಉಪಾಧ್ಯಕ್ಷರೇ ಇಲ್ಲದಂತಾಗಿದೆ ಎಂದು ಅ‍ವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ವರ್ಷ ಕಳೆದರೂ ಚನುನಾವಣೆ ಇಲ್ಲ

ಕಳೆದ ವರ್ಷ ಫೆಬ್ರವರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ತೆರವಾಗಿತ್ತು. ನಂತರ ಈವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿಲ್ಲ. ಪುರಸಭೆ ಅಧಿಕಾರಿಗಳು ಅಭಿವೃದ್ಧಿಗಿಂತ ದಾಖಲೆಗಳಲ್ಲೆ ಅಭಿವೃದ್ಧಿಯನ್ನು ತೋರಿಸುತ್ತಿದ್ದಾರೆ. ಪುರಸಭೆಯಲ್ಲಿ ಆಡಳಿತ ಮಂಡಳಿ ಇದ್ದರೂ ಅಲ್ಲಿ ಶಾಸಕರ ಮಾತೇ ಅಂತಿಮ, ಆದರೂ ಅವರು ಸದಸ್ಯರ ಸಭೆ ಕರೆದು ಸದಸ್ಯರ ಸಮಸ್ಯೆಗಳನ್ನು ಆಲಿಸಿಲ್ಲ ಎಂಬ ಅಸಮಾಧಾನ ಸದಸ್ಯರನ್ನು ಕಾಡುತ್ತಿದೆ.