ಬಾಂಗ್ಲಾ ವಿವಾಹಿತೆ ವೀಸಾ ಮುಕ್ತಾಯ: ಭಾರತ ಬಿಡಲು ಹೈಕೋರ್ಟ್ ನಿರ್ದೇಶನ

| Published : Jan 20 2024, 02:06 AM IST / Updated: Jan 20 2024, 04:14 PM IST

ಬಾಂಗ್ಲಾ ವಿವಾಹಿತೆ ವೀಸಾ ಮುಕ್ತಾಯ: ಭಾರತ ಬಿಡಲು ಹೈಕೋರ್ಟ್ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿನ ಬಾಂಗ್ಲಾ ವಿವಾಹಿತೆ ಚಟುವಟಿಕೆ ಸಂಶಯಾಸ್ಪದವಾಗಿದೆ. ಆಕೆ ಭಾರತದಲ್ಲಿಯೇ ಉಳಿಯಲು ಯಾವುದೇ ಸಹಾನುಭೂತಿ ತೋರಿಸಬಾರದು ಎಂದು ಎಫ್‌ಆರ್‌ಆರ್‌ಒ ಪರ ಉಪ ಸಾಲಿಸಿಟರ್‌ ಜನರಲ್ ಶಾಂತಿ ಭೂಷಣ್‌ ಸರ್ಕಾರ ಪ್ರತಿಪಾದಿಸಿದ್ದಾರೆ.

ಕನ್ನಡಪ್ರ ವಾರ್ತೆ ಬೆಂಗಳೂರು

ಭಾರತದ ಪ್ರಜೆಯನ್ನು ಪ್ರೀತಿಸಿ ಮದುವೆಯಾಗಿ ನಂತರ ಆತನಿಂದ ದೂರವಾಗಿದ್ದ ಬಾಂಗ್ಲಾ ಮಹಿಳೆಯ ವೀಸಾ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ತಾಯ್ನಾಡಿಗೆ ವಾಪಸು ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ಹೈಕೋರ್ಟ್‌ ನಿರ್ದೇಶಿಸಿದೆ.

ವೀಸಾ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿ ಎಕ್ಸಿಟ್‌ ಪರ್ಮಿಟ್‌ ನೀಡಿದ್ದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಬಾಂಗ್ಲಾ ಮಹಿಳೆ ರಕ್ತಿಮ ಖಾನುಮ್‌ (46) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ.

ಅರ್ಜಿದಾರೆ ನೆಲೆಸಿರುವ ಪ್ರದೇಶ ವ್ಯಾಪ್ತಿಯ ಪೊಲೀಸರು ವೀಸಾ ವಿಸ್ತರಿಸದಂತೆ ಎಫ್ಆರ್‌ಆರ್‌ಒಗೆ ಶಿಫಾರಸು ಮಾಡಿದ್ದಾರೆ. ಸದ್ಯ ಆಕೆಯನ್ನು ಪತಿ ತೊರೆದಿದ್ದಾರೆ. ಭಾರತದಲ್ಲಿನ ಆಕೆಯ ಚಟುವಟಿಕೆ ಸಂಶಯಾಸ್ಪದವಾಗಿದೆ. 

ಆಕೆ ಭಾರತದಲ್ಲಿಯೇ ಉಳಿಯಲು ಯಾವುದೇ ಸಹಾನುಭೂತಿ ತೋರಿಸಬಾರದು ಎಂದು ಎಫ್‌ಆರ್‌ಆರ್‌ಒ ಪರ ಉಪ ಸಾಲಿಸಿಟರ್‌ ಜನರಲ್ ಶಾಂತಿ ಭೂಷಣ್‌ ಸರ್ಕಾರ ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ಆಕೆಯ ವೀಸಾ ಅವಧಿ ಪೂರ್ಣಗೊಂಡಿದ್ದು, ಅದನ್ನು ಸಕ್ಷಮ ಪ್ರಾಧಿಕಾರ ವಿಸ್ತರಿಸಿಲ್ಲ. 

ದಾಖಲೆಗಳು ಇಲ್ಲದೆ ಭಾರತದಲ್ಲಿ ಉಳಿಯಲು ವಿದೇಶಿಯರು ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು ಎಂದು ಪೀಠ ತಿಳಿಸಿದೆ.

ಅಲ್ಲದೆ, ಅವಧಿ ಮೀರಿದ ವಿದೇಶಿಯರನ್ನು ಹೊರಹಾಕಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ಇಂತಹ ಪ್ರಕರಣದಲ್ಲಿ ಸಹಾನೂಭೂತಿ ತೋರಿದರೆ ಅದು ಸರ್ಕಾರ, ಎಫ್‌ಆಆರ್‌ಆರ್‌ಒ ಮತ್ತು ವಲಸಿಗರ ಬ್ಯೂರೋವಿನ ವಿವೇಚನಾಧಿಕಾರಕ್ಕೆ ಸಂಕೋಲೆ ಹಾಕಿದಂತಾಗುತ್ತದೆ. 

ಅದರಲ್ಲೂ ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ತೋರಿಸಲಾಗದು. ಹಾಗಾಗಿ, ಎಕ್ಸಿಟ್‌ ಪರ್ಮಿಟ್‌ ನೀಡಿರುವ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ಆದ್ದರಿಂದ ಅರ್ಜಿದಾರೆಯನ್ನು ದೇಶದಿಂದ ಹೊರಗೆ ಕಳುಹಿಸಲು ಎಫ್‌ಆರ್‌ಆರ್‌ಒ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣವೇನು?
ರಕ್ತಿಮ ಖಾನುಮ್‌ (46) ಬಾಂಗ್ಲಾ ದೇಶದ ಹುಟ್ಟಿ ಬೆಳೆದವರು. ಭಾರತದ ಜನಾರ್ದನ ರೆಡ್ಡಿ ಎಂಬಾತ ಆಕೆಯ ಸಂಪರ್ಕಕ್ಕೆ ಬಂದಿದ್ದ. ಅವರು ಪ್ರೀತಿಸಿ 2017ರ ಡಿ.25ರಂದು ಮದುವೆಯಾಗಿದ್ದರು. 

ಬಳಿಕ ಜನಾರ್ದನ ರೆಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಲ್ಪ ಕಾಲ ದಂಪತಿ ಚನ್ನೈನಲ್ಲಿ ವಾಸವಾಗಿದ್ದರು. ಬಳಿಕ ಸಂಬಂಧ ಹಳಸಿದ್ದರಿಂದ ಅವರಿಬ್ಬರು ದೂರವಾಗಿದ್ದರು. 

2019ರಲ್ಲಿ ರಕ್ತಿಮ ಅವರ ಪ್ರವಾಸಿ ವೀಸಾ ಅವಧಿ ಕೊನೆಗೊಂಡಿತ್ತು. ಇದರಿಂದ ಪ್ರವಾಸಿ ವೀಸಾವನ್ನು ಪ್ರವೇಶ ವೀಸಾವಾಗಿ ಪರಿವರ್ತಿಸಿಕೊಂಡಿದ್ದ ಭಾರತಲ್ಲಿಯೇ ನೆಲೆಸಿದ್ದರು.

ಆ ವೀಸಾ ಅವಧಿಯೂ 2022ರ ಆ.20ರಂದು ಕೊನೆಗೊಂಡಿದ್ದು, ಭಾರತ ಬಿಟ್ಟು ತೆರಳುವಂತೆ ರಕ್ತಿಮಗೆ ಎಕ್ಸಿಟ್‌ ಪರ್ಮಿಟ್‌ ನೀಡಿದ್ದರು. ಅದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.