ಶಿವಮೊಗ್ಗದಲ್ಲಿ ಬಾಂಗ್ಲಾದೇಶ ಬಾಕ್ಸ್‌ಗಳು ಪತ್ತೆ: ಆತಂಕ

| Published : Nov 06 2023, 12:45 AM IST

ಸಾರಾಂಶ

ಸರ್ವಮಂಗಳ ಎಂಬ ಹೆಸರಿನ ಜೊತೆ ಸ್ಟ್ರಾಂಡ್ ರೋಡ್, ಕೋಲ್ಕತ್ತ ಎಂಬ ವಿಳಾಸ ಪತ್ತೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ರೈಲ್ವೆ ನಿಲ್ದಾಣ ಆವರಣ ಸಮೀಪ ಭಾನುವಾರ ಬೆಳಗ್ಗೆ ಗೋಣಿ ಚೀಲದಲ್ಲಿ ಮುಚ್ಚಿದ್ದ ಎರಡು ಪೆಟ್ಟಿಗೆಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ರೈಲ್ವೆ ನಿಲ್ದಾಣದ ಪಾರ್ಕಿಂಗ್‌ ಸಮೀಪದ ಕಾಂಪೌಡ್‌ ಬಳಿ ಈ ಎರಡು ಬಾಕ್ಸ್‌ಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಬಾಕ್ಸ್‌ಗಳ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿದೆ. ಸರ್ವಮಂಗಳ ಎಂಬ ಹೆಸರಿನ ಜೊತೆ ಸ್ಟ್ರಾಂಡ್ ರೋಡ್, ಕೋಲ್ಕತ್ತ ಎಂಬ ವಿಳಾಸವು ಇದೆ.

ಶಿವಮೊಗ್ಗ ಡಿವೈಎಸ್‌ಪಿ ಸುರೇಶ್ ನೇತೃತ್ವದಲ್ಲಿ ಬಾಂಬ್‌ ಪತ್ತೆ ದಳ ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಸಿಕೊಂಡು ತಪಾಸಣೆ ನಡೆಯುತ್ತಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಬಾಕ್ಸ್‌ಗಳ ಬಳಿ ಕಾರುಗಳು ನಿಂತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಟೂರಿಸ್ಟ್ ಕಾರುಗಳ ಚಾಲಕರನ್ನು ವಿಚಾರಣೆ ಮಾಡಿದ ಪೊಲೀಸರು ರೈಲ್ವೆ ನಿಲ್ದಾಣದ ಆಟೋ ಚಾಲಕರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ.

ಪೆಟ್ಟಿಗೆಗಳಿರುವ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಎರಡು ಪೆಟ್ಟಿಗೆಗಳಿಯೊಳಗೆ ಏನಿದೆ ಎಂಬುವುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಈ ನಡುವೆ ಬೆಂಗಳೂರಿನಿಂದ ವಿಶೇಷ ತಪಾಸಣಾ ತಂಡವನ್ನು ಕರೆಯಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

- - - ಬಾಕ್ಸ್ ಬೆಂಗಳೂರು, ಮಂಗಳೂರು ಕಡೆಗಳಿಂದ ಬಾಂಬ್‌ಸ್ಕ್ವಾಡ್‌: ಶಾಸಕ ಹೇಳಿಕೆ

ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವ ಅನುಮಾನಸ್ಪದ ಬಾಕ್ಸ್‌ಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

ಬಾಕ್ಸ್‌ಗಳು ಸ್ಟೀಲ್ ಬಾಕ್ಸ್‌ಗಳಾಗಿದ್ದು, ಅವುಗಳ ಮೇಲೆ ಗೋಣಿಚೀಲದಲ್ಲಿ ಬಾಂಗ್ಲಾದೇಶ್ ಎಂದು ಬರೆಯಲಾಗಿದೆ. ಈ ಹಿನ್ನೆಲೆ ಸ್ವಲ್ಪಮಟ್ಟಿನ ಆತಂಕ ಎದುರಾಗಿದೆ. ಜಿಲ್ಲಾ ಪೊಲೀಸರು ಯಾವುದೇ ಆತಂಕ ಬೇಕಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ತನಿಖೆಗೆ ಬೆಂಗಳೂರು ಮತ್ತು ಮಂಗಳೂರು ಕಡೆಗಳಿಂದ ಬಾಂಬ್‌ಸ್ಕ್ವಾಡ್‌ ಕರೆಯಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಬಾಂಬ್ ಸ್ಕ್ವಾಡ್ ಗಳನ್ನು ಹೆಲಿಕ್ಯಾಪ್ಟರ್ ಮೂಲಕ ಕರೆಯಿಸಿ ತಕ್ಷಣ ತಪಾಸಣೆ ನಡೆಸಿದರೆ ಒಳ್ಳೆಯದು. ಈ ಬಗ್ಗೆ ಸರ್ಕಾರ ಆಲೋಚನೆ ನಡೆಸಬೇಕು ಎಂದರು.

- - - -5ಎಸ್‌ಎಂಜಿಕೆಪಿ03: ಶಿವಮೊಗ್ಗದ ರೈಲ್ವೆ ನಿಲ್ದಾಣ ಆವರಣ ಸಮೀಪ ಭಾನುವಾರ ಬೆಳಗ್ಗೆ ಪತ್ತೆ ಆಗಿರುವ ಗೋಣಿ ಚೀಲದಲ್ಲಿ ಮುಚ್ಚಿದ್ದ ಎರಡು ಪೆಟ್ಟಿಗೆಗಳು.