ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತುತ್ತು ಅನ್ನಕ್ಕಾಗಿ ಗಡಿಯಲ್ಲಿ ನುಸುಳಿ ಬಂದು ಕಾಫಿ ತೋಟ ಸೇರಿಕೊಂಡ ಬಾಂಗ್ಲಾ ನುಸುಳುಕೋರರಿಂದ ಸ್ಥಳೀಯ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಮಣೆ ಹಾಕಿದ ತೋಟಗಳ ಮಾಲೀಕರೇ ಇಂದು ಅದೇ ಕಾರ್ಮಿಕರಿಂದ ಬೆದರಿಕೆ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗೆ ಬಾಂಗ್ಲಾ ನುಸುಳುಕೋರರಿಂದ ಆಗುತ್ತಿರುವ ಅವಾಂತರಗಳ ಬಗ್ಗೆ ಸ್ಥಳೀಯ ಕಾರ್ಮಿಕರು ಬಿಚ್ಚಿಟ್ಟ ಸತ್ಯ. ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ವಾಟೆಪುರ ಕಾಫಿ ಎಸ್ಟೇಟಿನಲ್ಲಿ ಸ್ಥಳೀಯ ಕೆಲಸಗಾರರನ್ನು ಗುರುವಾರ ಭೇಟಿ ಮಾಡಿದ ಬಿಜೆಪಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಹರಿಹರಪುರ ಶಾಸಕ ಬಿ ಪಿ ಹರೀಶ್, ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ತಂಡ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರು ಹಲವು ಸಮಸ್ಯೆಗಳನ್ನು ತಂಡದ ಮುಂದೆ ತೆರೆದಿಟ್ಟರು.ನಂತರ ಮಾತನಾಡಿದ ಅರವಿಂದ ಲಿಂಬಾವಳಿ, ಈಗಾಗಲೇ ರಾಜ್ಯಾದ್ಯಂತ ಅಕ್ರಮ ವಲಸಿಗರ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದು. ವಾರ್ ರೂಮ್‌ಗಳನ್ನು ತೆರೆಯಲಾಗಿದೆ. ಈಗಾಗಲೇ ಈವರೆಗೂ 3500 ದೂರುಗಳು ಬಂದಿದ್ದು. ಬೆಂಗಳೂರು, ಚಿಕ್ಕಮಗಳೂರು,ಕೊಡಗು, ಬಿಜಾಪುರ,ಜಿಲ್ಲೆಗಳಿಂದಲೂ ಹೆಚ್ಚಿನ ದೂರುಗಳು ಬರುತ್ತಿವೆ. ಈ ಭಾಗದಿಂದಲೂ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ, ಇಂದು ಸ್ಥಳೀಯರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದು, ಅಕ್ರಮ ವಲಸಿಗರಿಂದಾಗಿ ಸ್ಥಳೀಯರಿಗೆ ಕೆಲಸ ಇಲ್ಲದಂತಾಗಿದ್ದು, ನಕಲಿ ದಾಖಲಾತಿಗಳನ್ನು ಮಾಡಿಸಿಕೊಂಡಿರುವ ಇವರು ಈಗ ವೋಟರ್ ಐಡಿಗಳನ್ನು ಮಾಡಿಸಿಕೊಳ್ಳಲು ಮುಂದಾಗಿದ್ದು, ದಿನೇ ದಿನೇ ಇವರ ಆರ್ಭಟ ಅತಿಯಾಗುತ್ತಿದ್ದು, ಇವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದುದರಿಂದಾಗಿ ಈ ಭಾಗದ ಕಾಫಿ ಎಸ್ಟೇಟ್ ಮಾಲೀಕರಲ್ಲಿ ನಾವು ಮನವಿ ಮಾಡಿಕೊಳ್ಳುವುದೇನೆಂದರೆ, ಹತ್ತು ರುಪಾಯಿ ಸಂಬಳ ಜಾಸ್ತಿ ಆದರೂ ಪರವಾಗಿಲ್ಲ. ನಮ್ಮ ದೇಶದವರಿಗೆ ಕೆಲಸ ಕೊಡಿ. ಇಂತಹ ಅಕ್ರಮ ವಲಸಿಗರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ ಎಂಬುದಾಗಿದೆ. ರಾಜ್ಯ ಸರ್ಕಾರ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮೃದು ಧೋರಣೆ ತೋರುತ್ತಿದೆ. ಇಂಥವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವ ವರೆಗೂ ಹಾಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.