ಸಾರಾಂಶ
ಹಾವೇರಿ: ಬಂಜಾರ ಸಮಾಜಕ್ಕೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿರುವುದನ್ನು ವಿರೋಧಿಸಿ ಬಂಜಾರ ಸಮಾಜದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ನ್ಯಾ. ನಾಗಮೋಹನ್‌ದಾಸ್ ವರದಿಯಲ್ಲಿ ದೋಷಗಳಿದ್ದು, ಬಂಜಾರ, ಬೋವಿ, ಕೊರಚ, ಕೊರಮ ಮತ್ತಿತರ ಸಮುದಾಯಗಳಿಗೆ ಅನ್ಯಾಯವಾಗಿದೆ. ಈ ವರದಿಯನ್ನು ಏಕಪಕ್ಷೀಯವಾಗಿ ಅಂಗೀಕರಿಸಬಾರದು. ಒಳಮೀಸಲಾತಿಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ತಲಾ ಶೇ. 6ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನುಳಿದ 59 ಜಾತಿಗಳಿಗೆ ಕೇವಲ ಶೇ. 5ರಷ್ಟು ಮೀಸಲಾತಿ ಇದೆ. ಇದನ್ನು ಒಪ್ಪಲು ಸಾಧ್ಯವಿಲ್ಲ.
ಸಚಿವ ಸಂಪುಟದಲ್ಲಿ ಜಾರಿ ಮಾಡಿರುವ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈಗಾಗಲೇ ಸಾಮಾಜಿಕ ಅಸಮಾನತೆ, ಆರ್ಥಿಕ ಹಿಂಜರಿತ, ನಿರುದ್ಯೋಗದಿಂದ ಬಳಲುತ್ತಿರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಮಾರಕ ಪರಿಣಾಮ ಬೀರುತ್ತದೆ.ಜನಸಂಖ್ಯೆಗನುಣವಾಗಿ ಜಾರಿಯಾಗಬೇಕಿದ್ದ ಒಳಮೀಸಲಾತಿಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು 63 ಜಾತಿಗಳನ್ನು ಸೇರಿಸಿ ಕೇವಲ ಶೇ. 5ರಷ್ಟು ಮೀಸಲಾತಿ ನೀಡಿರುವುದು ಘನಘೋರ ಅನ್ಯಾಯದ ಜತೆಗೆ ಮರಣಶಾಸನವೂ ಆಗಿದೆ. ರಾಜ್ಯದಲ್ಲಿ ಬಂಜಾರ ಸಮುದಾಯವು ವಲಸೆ, ಅನಕ್ಷರತೆ, ಬಡತನ ಜತೆಗೆ ಈಗಲೂ ಕೂಡ ತಾಂಡಾಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಅತ್ಯಂತ ಹಿಂದುಳಿದಿದೆ.ಈ ಸಮುದಾಯದ ಶೇ. 90ರಷ್ಟು ಜನ ದಿನಗೂಲಿ ನಂಬಿಕೊಂಡೆ ಜೀವನ ನಡೆಸುತ್ತಿದ್ದಾರೆ. ಎಷ್ಟೋ ಜನರು ಈಗಲೂ ಒಂದು ಹೊತ್ತಿನ ಊಟಕ್ಕೂ ಪರದಾಡುವ ಶೋಚನೀಯ ಸ್ಥಿತಿಯಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ 63 ಜಾತಿಗಳನ್ನು ಸೇರಿಸಿ ಕೇವಲ ಶೇ. 5ರಷ್ಟು ಮೀಸಲಾತಿ ನೀಡಿದ್ದು ಈ ಸಮುದಾಯಗಳ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಸಂಪುಟ ಒಪ್ಪಿರುವ ಈ ಒಳಮೀಸಲಾತಿಯನ್ನು ಮುಖ್ಯಮಂತ್ರಿ ಅವರು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆ ತೀವುಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಈರಪ್ಪ ಲಮಾಣಿ, ರಾಮಣ್ಣ ನಾಯಕ್, ಜಯರಾಮ್ ಮಾಳಪುರ್, ರಾಜೇಶ್ ಚವ್ಹಾಣ, ಚಂದ್ರಪ್ಪ ಲಮಾಣಿ, ತಿರಕಪ್ಪ ನಾಯಕ್, ಹೋಬ ನಾಯ್ಕ, ರಮೇಶ ಹಂಚಿನಮನಿ, ಸೋಮಣ್ಣ ಲಮಾಣಿ, ಬೀರಪ್ಪ ಲಮಾಣಿ, ಕುಮಾರ್ ಲಮಾಣಿ, ಭೀಮಣ್ಣ ಮೇಸಿ, ಎಚ್.ಎಂ. ನಾಯಕ್, ನಾಗೇಶ್ ಚೌವ್ಹಾಣ, ಮಹೇಶ್ ಬಣಕಾರ ಸೇರದಂತೆ ಹಲವಾರು ಪ್ರಮುಖರು ಇದ್ದರು.