ಒಳಮೀಸಲು ವಿರುದ್ಧ ಬಂಜಾರರ ಆಕ್ರೋಶ

| Published : Sep 07 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಘೋಷಿಸಿದ ಒಳಮೀಸಲಾತಿ ಅವೈಜ್ಞಾನಿಕವಾಗಿದ್ದು, ಇದರಿಂದ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತಿದೆಯೆಂದು ಆರೋಪಿಪಿ ಜಿಲ್ಲಾ ಬಂಜಾರ ಸಮಾಜವು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಮಾಜದ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟಿಸಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಘೋಷಿಸಿದ ಒಳಮೀಸಲಾತಿ ಅವೈಜ್ಞಾನಿಕವಾಗಿದ್ದು, ಇದರಿಂದ ಬಂಜಾರ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತಿದೆಯೆಂದು ಆರೋಪಿಪಿ ಜಿಲ್ಲಾ ಬಂಜಾರ ಸಮಾಜವು ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಮಾಜದ ಮುಖಂಡರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟಿಸಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ಶ್ರೀ ಜಯದೇವ ವೃತ್ತ, ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಘೋಷಣೆ ಕೂಗುತ್ತ ಸಾಗಿ, ನಂತರ ಎಸಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಇದೇ ವೇಳೆ ಮಾತನಾಡಿದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ರಾಜ್ಯ ಸರ್ಕಾರದ ಒಳಮೀಸಲಾತಿಯಿಂದ ಬಂಜಾರ ಸೇರಿದಂತೆ ಅನೇಕ ಜಾತಿಗಳಿಗೆ ಘೋರ ಅನ್ಯಾಯವಾಗಿದೆ. ಈಗ ಘೋಷಿಸಿರುವ ಒಳಮೀಸಲಾತಿಯನ್ನು ವಾಪಸ್ ಪಡೆದು, ಸಮಗ್ರ ಅಧ್ಯಯನ ನಡೆಸಿ, ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ತನ್ಮೂಲಕ ಯಾವುದೇ ಗೊಂದಲಕ್ಕೆ ಎಡೆ ಮಾಡದಂತೆ ಸಾಮಾಜಿಕ ನ್ಯಾಯದ ತಳಹದಿ ಮೇಲೆ ಒಳಮೀಸಲಾತಿ ಪ್ರಕಟಿಸಬೇಕು ಎಂದರು.

ಸರ್ಕಾರ ಒಂದು ವೇಳೆ ನಮ್ಮ ಬೇಡಿಕೆ, ಕೂಗಿಗೆ ಸ್ಪಂದಿಸದಿದ್ದರೆ ಸೆ.10ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಬಂಜಾರ ಸಮುದಾಯದಿಂದ ತೀವ್ರ ಸ್ವರೂಪದ ಹೋರಾಟ ನಡೆಸುವ ಜೊತೆಗೆ ಸಂದರ್ಭ ಬಂದರೆ ವಿಧಾನಸೌಧಕ್ಕೆ ಮುತ್ತಿಗೆಯನ್ನೂ ಹಾಕುತ್ತೇವೆ ಎಂದು ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎಂ.ಬಸವರಾಜನಾಯ್ಕ ಮಾತನಾಡಿ, ಒಳಮೀಸಲಾತಿ ವಿಚಾರವಾಗಿ ಯಾರದ್ದೋ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಬಂಜಾರ ಹಾಗೂ 63 ಸೋದರ ಸಮುದಾಯಗಳಿಗೆ ಕೇವಲ ಶೇ.5 ಒಳ ಮೀಸಲಾತಿ ಘೋಷಿಸಿ ಅನ್ಯಾಯ ಮಾಡಿದೆ. ಒಳಮೀಸಲಾತಿ ಹಂಚಿಕೆ ಕೆಲವೇ ಕೆಲವು ಪ್ರಬಲ ಸಮುದಾಯಗಳಿಗೆ ಸಿಂಹಪಾಲು ನೀಡಿದಂತಾಗಿದೆ. ಇದರಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.

ನಾಗಮೋಹನ್ ದಾಸ್ ಆಯೋಗವು ಸಂಗ್ರಹಿಸಿದ ದತ್ತಾಂಶವನ್ನು ಸಾರ್ವಜನಿಕವಾಗಿ ಚರ್ಚೆಗೊಳಪಡಿಸದೇ ತರಾತುರಿಯಲ್ಲಿ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಆಯೋಗ ನಡೆಸಿದ ಸಮೀಕ್ಷೆ ವೇಳೆ ನಗರ ವಾಸಿಗಳ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಅದೇ ರೀತಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯ, ದೊಡ್ಡ ಊರು, ಕಾಫಿ ಸೀಮೆ, ಘಟ್ಟ ಪ್ರದೇಶಕ್ಕೆ ಗುಳೇ ಹೋದ, ವಲಸೆ ಹೋಗಿರುವವರನ್ನೇ ಸಮೀಕ್ಷೆಯಲ್ಲಿ ಸೇರಿಸಿಲ್ಲ ಎಂದರು.

ಸಮಾಜದ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಆರ್.ಎಲ್.ಶಿವಪ್ರಕಾಶ ಮಾತನಾಡಿ, ಯಾವುದೇ ಕಾರಣಕ್ಕೂ ಬಂಜಾರ ಸೇರಿದಂತೆ ಅನ್ಯಾಯಕ್ಕೊಳಗಾದ ಸಮುದಾಯಗಳು ಒಳ ಮೀಸಲಾತಿ ಒಪ್ಪುವುದಿಲ್ಲ. ಶೇ.5 ಒಳ ಮೀಸಲಾತಿ ನೀಡುವ ಮೂಲಕ 63 ಸೋದರ ಸಮುದಾಯಗಳಿಗೂ ಸರ್ಕಾರವು ಅನ್ಯಾಯ ಮಾಡಿದೆ. ನಮ್ಮ ಹೋರಾಟ ನ್ಯಾಯ ಸಿಗುವವರೆಗೂ ನಡೆಯಲಿದ್ದು, ನಮಗೆ ಸರ್ಕಾರ ಮೊದಲು ನ್ಯಾಯ ನೀಡಲಿ ಎಂದು ತಾಕೀತು ಮಾಡಿದರು.

1919ರಲ್ಲಿ ಮಿಲ್ಲರ್ ವರದಿಯಂತೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಂಜಾರ ಸಮುದಾಯದ ಬಡತನ, ಅಲೆಮಾರಿತನ, ನಿಕೃಷ್ಟ ಜೀವನದ ಸ್ಥಿತಿಗತಿ ಆದರಿಸಿ, ಪರಿಶಿಷ್ಟ ಜಾತಿಗೆ ಸೇರಿಸಿದ್ದಾರೆಯೇ ಹೊರತು, ಸರ್ಕಾರ ಭಿಕ್ಷೆಯಿಂದಲ್ಲ. ನಮ್ಮ ಸಮಾಜದ ಮಕ್ಕಳ ಭವಿಷ್ಯ ತೂಗುಗತ್ತಿ ಮೇಲಿದೆ ಎಂದರು.

ಬಂಜಾರ ಸಮಾಜದ ಮುಖಂಡರಾದ ಮಂಜಾನಾಯ್ಕ, ಅನಿಲಕುಮಾರ ನಾಯ್ಕ, ಮಲ್ಲೇಶ ನಾಯ್ಕ, ಬಂಜಾರ ಸಮುದಾಯದ ಶ್ರೀಗಳಾದ ಶಿವಪ್ರಕಾಶ ಸ್ವಾಮೀಜಿ, ಮುಖಂಡರಾದ ಹನುಮಂತ ನಾಯ್ಕ, ರಮೇಶ ನಾಯ್ಕ, ಮಂಜಾನಾಯ್ಕ, ಹಾಲೇಕಲ್ಲು ಚಂದ್ರನಾಯ್ಕ, ವೆಂಕಟೇಶ

ನಾಯ್ಕ, ಸುರೇಂದ್ರ ನಾಯ್ಕ, ಮಹೇಶ ನಾಯ್ಕ, ಚಿನ್ನಸಮುದ್ರ ಶೇಖರನಾಯ್ಕ, ಜಗಳೂರು ಸತೀಶ ನಾಯ್ಕ, ಹೊನ್ನಾಳಿ ಸುರೇಂದ್ರ ನಾಯ್ಕ, ಗುಡ್ಡದ ಬೆನಕನಹಳ್ಳಿ ರವಿ ನಾಯ್ಕ ಇತರರು ಇದ್ದರು.ದ್ದರು.