ಬ್ಯಾಂಕ್‌ ನೌಕರನ ಪತ್ನಿ ರೇಪ್‌, ಹತ್ಯೆ ರಹಸ್ಯ 11 ವರ್ಷ ಬಳಿಕ ಬಯಲು!

| Published : May 25 2024, 01:30 AM IST / Updated: May 25 2024, 07:33 AM IST

bangla child rape and murder
ಬ್ಯಾಂಕ್‌ ನೌಕರನ ಪತ್ನಿ ರೇಪ್‌, ಹತ್ಯೆ ರಹಸ್ಯ 11 ವರ್ಷ ಬಳಿಕ ಬಯಲು!
Share this Article
  • FB
  • TW
  • Linkdin
  • Email

ಸಾರಾಂಶ

ಸಹೋದ್ಯೋಗಿಯ ಪತ್ನಿಯ ಮೇಲೆ ಬ್ಯಾಂಕ್‌ ಮ್ಯಾನೇಜರ್‌ ಕಣ್ಣು ಹಾಕಿ ಆಕೆಯನ್ನು ತನ್ನ ಕ್ಲಬ್‌ಗೆ ಕರೆದೊಯ್ದು ಸಾಮೂಹಿಕ ರೇಪ್‌ ಮಾಡಿ ಬಳಿಕ ಹತ್ಯೆ ಮಾಡಿರುವ ಆರೋಪಿಗಳ ಜಾಡು ಸಿಐಡಿ ತನಿಖೆಯಲ್ಲಿ ಬಯಲು ಆಗಿದೆ.

 ಬೆಂಗಳೂರು :  ರಾಜಧಾನಿಯಲ್ಲಿ 11 ವರ್ಷಗಳ ಹಿಂದೆ ನಿಗೂಢವಾಗಿ ನಡೆದಿದ್ದ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ಸು ಕಂಡ ಸಿಐಡಿ, ಈ ಸಂಬಂಧ ಮೃತಳ ಸಹೋದ್ಯೋಗಿ ಸೇರಿದಂತೆ ಮೂವರನ್ನು ಬಂಧಿಸಿದೆ.

ಸಂಜಯನಗರದ ನರಸಿಂಹಮೂರ್ತಿ, ಆತನ ಸ್ನೇಹಿತರಾದ ಎನ್‌.ಹರಿಪ್ರಸಾದ್ ಹಾಗೂ ಸಿ.ದೀಪಕ್ ಬಂಧಿತರಾಗಿದ್ದಾರೆ. 2013ರ ಫೆ.25ರಂದು ಕೆನರಾ ಬ್ಯಾಂಕ್ ಅಧಿಕಾರಿ ಬಾಲಕೃಷ್ಣ ಪೈ ಪತ್ನಿ ವಿಜಯಾ ಪೈ ಅವರನ್ನು ಬಲವಂತವಾಗಿ ಕರೆದೊಯ್ದು ತನ್ನ ಸ್ನೇಹಿತರ ಜತೆ ಅದೇ ಬ್ಯಾಂಕ್‌ನ ಮ್ಯಾನೇಜರ್‌ ನರಸಿಂಹಮೂರ್ತಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆದರೆ ಈ ಕೃತ್ಯದ ಆರಂಭದಲ್ಲಿ ಮೃತರ ಪತಿ ಮೇಲೆ ಶಂಕಿಸಿ ಚಿಕ್ಕಜಾಲ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದು ಪತ್ನಿ ಕೊಲೆಗೆ ನ್ಯಾಯಕ್ಕಾಗಿ ಬಾಲಕೃಷ್ಣ ತ್ರಿವಿಕ್ರಮನಂತೆ ಹೋರಾಟ ನಡೆಸಿದ್ದರು. ಅಂತಿಮ ಸತ್ಯ ಬಯಲಾಗಿ ಅವರ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಹೇಗೆ ಕೊಲೆ?:

2013ರಲ್ಲಿ ಮಹಾಲಕ್ಷ್ಮಿ ಲೇಔಟ್‌ನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನರಸಿಂಹಮೂರ್ತಿ ವ್ಯವಸ್ಥಾಪಕರಾಗಿದ್ದ. ಅದೇ ಬ್ಯಾಂಕ್‌ನಲ್ಲಿ ಮೃತ ವಿಜಯಾ ಪತಿ ಬಾಲಕೃಷ್ಣ ಪೈ ಗುಮಾಸ್ತರಾಗಿದ್ದರು. ಹೆಬ್ಬಾಳ ಸಮೀಪದ ನಾಗಶೆಟ್ಟಿಹಳ್ಳಿಯ ಬಸವೇಶ್ವರ ಬಡಾವಣೆಯಲ್ಲಿ ವಿಜಯಾ ಕುಟುಂಬ ನೆಲೆಸಿತ್ತು. ಅವರ ಕುಟುಂಬಕ್ಕೆ ನರಸಿಂಹಮೂರ್ತಿ ಪ್ಯಾಮಿಲಿ ಫ್ರೆಂಡ್ ಆಗಿದ್ದ. ಇದೇ ಸಲುಗೆಯಲ್ಲಿ ಆಗಾಗ್ಗೆ ವಿಜಯಾ ಅವರ ಮನೆಗೆ ಬಂದು ಹೋಗೋದು ಆತ ಮಾಡುತ್ತಿದ್ದ. ಆ ವೇಳೆ ತನ್ನ ಸಹೋದ್ಯೋಗಿ ಪತ್ನಿ ಮೇಲೆ ವ್ಯಾಮೋಹಗೊಂಡಿದ್ದ ಮೂರ್ತಿ, ವಿಜಯಾ ಅವರನ್ನು ಒಲಿಸಿಕೊಳ್ಳಲು ಯತ್ನಿಸಿ ವಿಫಲವಾಗಿದ್ದ. ಎಂದಿನಂತೆ 2013ರ ಫೆ.14 ರಂದು ಬೆಳಗ್ಗೆ 7 ಗಂಟೆಗೆ ವಿಜಯಾ ಕೆಲಸಕ್ಕೆ ಹೊರಟಿದ್ದರು. ಆಗ ಭದ್ರಪ್ಪ ಲೇಔಟ್ ಬಳಿ ಅವರನ್ನು ನೋಡಿದ ಮೂರ್ತಿ, ತನ್ನ ಕ್ಲಬ್‌ಗೆ ಕರೆದೊಯ್ದು ಅತ್ಯಾಚಾರ ಎಸಗಲು ಹೊಂಚು ಹಾಕುತ್ತಾನೆ. ಕೂಡಲೇ ತನ್ನ ಕ್ಲಬ್ ಕೆಲಸಗಾರ ದೀಪಕ್ ಹಾಗೂ ಸ್ನೇಹಿತನಿಗೆ 7.30 ಗಂಟೆಗೆ ಕ್ಲಬ್‌ಗೆ ಬರುವಂತೆ ಆತ ಹೇಳಿದ್ದ.

ಆನಂತರ ಕೆಲಸಕ್ಕೆ ಹೋಗಲು ಹೆಬ್ಬಾಳ ಮೇಲ್ಸೇತುವೆ ಬಳಿ ಬಸ್ಸಿಗೆ ಕಾಯುತ್ತಿದ್ದ ವಿಜಯಾ ಅವರ ಬಳಿ ತೆರಳಿ ನರಸಿಂಹ ಮೂರ್ತಿ, ‘ಏನಮ್ಮ ನನ್ನ ಕ್ಲಬ್ ಉದ್ಘಾಟನೆಗೆ ನೀನು ಬರಲಿಲ್ಲ. ಬಾರಮ್ಮ ನನ್ನ ಕ್ಲಬ್ ನೋಡಿ ಹೋಗು’ ಎಂದು ಹೇಳಿ ಬಲವಂತವಾಗಿ ತನ್ನ ಕಾರಿಗೆ ಹತ್ತಿಸಿಕೊಂಡಿದ್ದ. ಆನಂತರ ಸಹಕಾರನಗರದಲ್ಲಿ ತಾನು ನಡೆಸುತ್ತಿದ್ದ ಹ್ಯಾಂಬಿಡೆಂಟ್ ಕ್ಲಬ್‌ಗೆ ಆಕೆಯನ್ನು ಆರೋಪಿ ಕರೆತಂದಿದ್ದ. ಬಳಿಕ ತನ್ನ ಚೇಂಬರ್‌ಗೆ ಕರೆದೊಯ್ದು ಕುಶಲೋಪರಿ ಮಾತನಾಡುತ್ತ ಆಕೆಯ ಮೈ ಮುಟ್ಟಿದ್ದಾನೆ. ಈ ವರ್ತನೆಯಿಂದ ದಿಗಿಲುಗೊಂಡ ವಿಜಯಾ, ಮೂರ್ತಿ ಮೇಲೆ ರೇಗಾಡಿದ್ದಾರೆ. ಆಗ ಆಕೆಯ ಮೇಲೆ ಎರಗಿದ ನರಸಿಂಹ ಮೂರ್ತಿ ಅತ್ಯಾಚಾರ ಎಸಗಿದ್ದಾನೆ.ಬಳಿಕ ಆತನ ಸೂಚನೆಯಂತೆ ಕ್ಲಬ್ ಕೆಲಸಗಾರ ದೀಪಕ್ ಹಾಗೂ ಗೆಳೆಯ ಹರಿಪ್ರಸಾದ್ ಬಲ್ಕಾತ್ಕಾರ ಮಾಡಿದ್ದಾರೆ. ಈ ಕೃತ್ಯದ ಬಳಿಕ ದುಪ್ಪಟ್ಟದಿಂದ ಆಕೆ ಕುತ್ತಿಗೆಯನ್ನು ಜಿಗಿದು ಆರೋಪಿಗಳು ಹತ್ಯೆ ಮಾಡಿದ್ದರು. ಮೃತದೇಹವನ್ನು ಮೂಟೆಯಲ್ಲಿ ತುಂಬಿಕೊಂಡು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತುಕದಹಳ್ಳಿಯ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಂದಿದ್ದರು. ಇತ್ತ ಮನೆಗೆ ಪತ್ನಿ ಬಾರದೆ ಹೋದಾಗ ಸಂಜಯನಗರ ಠಾಣೆಗೆ ಮೃತಳ ಪತಿ ಬಾಲಕೃಷ್ಣ ದೂರು ನೀಡಿದ್ದರು. ಮೂರು ದಿನಗಳ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಮೃತಳ ಪತಿಯ ಬಂಧನ

ವಿಜಯಾ ಕೊಲೆ ಪ್ರಕರಣದ ತನಿಖೆ ನಡೆಸಿದ ಚಿಕ್ಕಜಾಲ ಪೊಲೀಸರು, ಕೃತ್ಯದಲ್ಲಿ ಪಾತ್ರವಿದೆ ಎಂದು ಹೇಳಿ ಮೃತಳ ಪತಿ ಬಾಲೃಷ್ಣರವನ್ನು ಬಂಧಿಸಿದ್ದರು. 72 ದಿನಗಳ ಬಳಿಕ ಜೈಲಿನಿಂದ ಜಾಮೀನು ಪಡೆದು ಅವರು ಹೊರಬಂದರು. ಕೊನೆಗೆ ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳಿ ನ್ಯಾಯಾಲಯಕ್ಕೆ ಎರಡು ಬಾರಿ ಪೊಲೀಸರು ‘ಸಿ’ ರಿಪೋರ್ಟ್ ಸಲ್ಲಿಸಿದ್ದರು.

ಪತಿಯ ಕಾನೂನು ಹೋರಾಟ: ₹50 ಲಕ್ಷ ಪರಿಹಾರಕ್ಕೆ ಮನವಿ

ತಮ್ಮ ಪತ್ನಿ ಕೊಲೆಗೆ ಕಾನೂನು ಹೋರಾಟ ಶುರು ಮಾಡಿದ ಬಾಲಕೃಷ್ಣ, ಕೃತ್ಯದ ತನಿಖೆ ಕೋರಿ ಹೈಕೋರ್ಟ್ ಮೊರೆ ಹೋದರು. ಆಗ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನ್ಯಾಯಾಲಯ ವಹಿಸಿತು. ಅಂತೆಯೇ ಸಿಐಡಿ ಡಿಜಿಪಿ ಡಾ। ಎಂ.ಎ.ಸಲೀಂ ಮಾರ್ಗದರ್ಶನದಲ್ಲಿ ಎಸ್ಪಿ ವೆಂಕಟೇಶ್ ನೇೃತ್ವದಲ್ಲಿ ಇನ್‌ಸ್ಪೆಕ್ಟರ್‌ ನರೇಂದ್ರ ಬಾಬು ತಂಡ ತನಿಖೆ ಆರಂಭಿಸಿತು.

ಇನ್ನು ಕೊಲೆ ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೆ ಬಂಧಿಸಿ ಜೈಲಿಗೆ ಕಳುಹಿಸಿದ್ದ ಸಂಜಯನಗರ ಪೊಲೀಸರಿಂದ ₹50 ಲಕ್ಷ ಪರಿಹಾರ ಕೊಡಿಸುವಂತೆ ನ್ಯಾಯಾಲಯಕ್ಕೆ ಬಾಲಕೃಷ್ಣ ಮನವಿ ಕೂಡ ಮಾಡಿದ್ದರು.

ಮಂಪರು ಪರೀಕ್ಷೆಯಲ್ಲಿ ಸತ್ಯ ಬಯಲು

ಈ ಪ್ರಕರಣದ ತನಿಖೆಗಿಳಿದ ಸಿಐಡಿ, ಮೃತ ವಿಜಯಾ ಹಾಗೂ ಆರೋಪಿ ನರಸಿಂಹ ಮೂರ್ತಿ ಅವರ ಮೊಬೈಲ್ ಕರೆಗಳ ವಿವರವನ್ನು ಪರಿಶೀಲಿಸಿತು. ಆಗ ಕೃತ್ಯ ನಡೆದ ದಿನ ದೀಪಕ್‌ಗೆ ಎಂಟು ಎಸ್‌ಎಂಎಸ್‌ಗಳನ್ನು ಮೂರ್ತಿ ಕಳುಹಿಸಿದ್ದ. ಈ ಸುಳಿವು ಆಧರಿಸಿ ದೀಪಕ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟ. ಬಳಿಕ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ನರಸಿಂಹ ಮೂರ್ತಿ ಹಾಗೂ ಆತನ ಸ್ನೇಹಿತ ಹರಿಪ್ರಸಾದ್‌ನನ್ನು ಸಿಐಡಿ ಬಂಧಿಸಿದೆ. ಅಲ್ಲದೆ ಈ ಆರೋಪಿಗಳನ್ನು ಬ್ರೈನ್‌ ಮ್ಯಾಪಿಂಗ್‌, ನಾರ್ಕೋ ಅನಾಲಿಸಿಸ್‌ ಪರೀಕ್ಷೆ ಒಳಪಡಿಸಿದಾಗ ಕೊಲೆ ರಹಸ್ಯ ಕಕ್ಕಿದ್ದಾರೆ.

ತಾನೇ ಸಲಹೆ ಕೊಟ್ಟು ಸಿಕ್ಕಿಬಿದ್ದ ಮೂರ್ತಿ

ಹತ್ಯೆ ಕೃತ್ಯದಲ್ಲಿ ತನ್ನ ಮೇಲೆ ಗೆಳೆಯ ಬಾಲಕೃಷ್ಣನಿಗೆ ಅನುಮಾನ ಮೂಡದಂತೆ ನರಸಿಂಹಮೂರ್ತಿ ನಡೆದುಕೊಂಡಿದ್ದ. ವಿಜಯಾ ಸಾವಿನ ಬಳಿಕ ತಾನೇ ಬಾಲಕೃಷ್ಣರನ್ನು ಬ್ಯಾಂಕ್‌ ಕೆಲಸಕ್ಕೆ ಕರೆದೊಯ್ದು ಆರೋಪಿ ಬರುತ್ತಿದ್ದ. ಅಲ್ಲದೆ ಕೃತ್ಯದಲ್ಲಿ ಬಾಲಕೃಷ್ಣನ ಮೇಲೆ ಪೊಲೀಸರಿಗೆ ಅನುಮಾನ ಮೂಡುವಂತೆ ಸಾಂದರ್ಭಿಕ ಸಾಕ್ಷ್ಯಗಳನ್ನು ಆತ ಸೃಷ್ಟಿಸಿದ್ದ. ಕೊನೆಗೆ ಸಿಐಡಿ ಅಥವಾ ಸಿಬಿಐ ತನಿಖೆಗೆ ಕೋರಿ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಬಾಲಕೃಷ್ಣ ಅವರಿಗೆ ಆರೋಪಿಯೇ ಸಲಹೆ ಕೊಟ್ಟಿದ್ದ.