ಚಿಕ್ಕಮಗಳೂರುಬ್ಯಾಂಕಿಂಗ್ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಪ್ರತಿ ವಾರ ಐದು ದಿನಗಳು ಮಾತ್ರ ಕೆಲಸ ನಿರ್ವಹಿಸಲು ಸರ್ಕಾರ ಅನುಮೋದಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರು ನಗರದ ಕೆನರಾ ಬ್ಯಾಂಕ್ ಮುಖ್ಯಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

- ಕೆನರಾ ಬ್ಯಾಂಕ್‌ ಮುಖ್ಯ ಕಚೇರಿ ಎದುರು ನೌಕರರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ಯಾಂಕಿಂಗ್ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಪ್ರತಿ ವಾರ ಐದು ದಿನಗಳು ಮಾತ್ರ ಕೆಲಸ ನಿರ್ವಹಿಸಲು ಸರ್ಕಾರ ಅನುಮೋದಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರು ನಗರದ ಕೆನರಾ ಬ್ಯಾಂಕ್ ಮುಖ್ಯಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಸವರಾಜ್, ಪ್ರಸ್ತುತ ತಿಂಗಳಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಈಗಾಗಲೇ ಬ್ಯಾಂಕ್‌ಗಳಿಗೆ ರಜಾ ದಿನವಾಗಿದೆ. ಅದರಂತೆ ಪ್ರತಿ ವಾರ ನೌಕರರು ಐದು ದಿನ ಕೆಲಸ ನಿರ್ವಹಿಸಿ, ಉಳಿದ ಎರಡು ದಿನಗಳಿಗೆ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ ಐದು ಕೆಲಸದ ದಿನಗಳನ್ನು ಪರಿಚಯಿಸಬೇಕು ಎಂದು ಯುನೈಟೆಡ್ ಪೋರಮ್ ಆಫ್ ಬ್ಯಾಂಕ್ ಯೂನಿಯನ್‌ನಿಂದ ಒತ್ತಾಯಿಸಿದ್ದು, 2015 ರಲ್ಲಿ ಸಹಿ ಮಾಡಿದ 10ನೇ ದ್ವಿಪಕ್ಷೀಯ ಒಪ್ಪಂದ, 7ನೇ ಜಂಟಿ ಟಿಪ್ಪಣಿ ಯಲ್ಲಿ ಇದನ್ನು ಐಬಿಎ ಮತ್ತು ಸರ್ಕಾರ ಒಪ್ಪಿಕೊಂಡು ಪ್ರತಿ 2ನೇ ಮತ್ತು 4ನೇ ಶನಿವಾರ ರಜಾ ದಿನವಾಗಿ ಘೋಷಿಸಿದೆ ಎಂದರು.

ಹಣಕಾಸು ವಲಯದಲ್ಲಿ ಆರ್‌ಬಿಐ, ಎಲ್‌ಐಸಿಗಳಲ್ಲಿ ಪ್ರತಿ ವಾರ ಐದು ದಿನಗಳ ಕೆಲಸ ಜಾರಿಗೆ ತರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲಾ ಕಚೇರಿಗಳೂ ಸೋಮವಾರ, ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಾರ್ವ ಜನಿಕ ಸೇವೆಯಲ್ಲಿ ಕೆಲಸ ನಿರ್ವಹಿಸುವ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ನೌಕರರಿಗೆ ಈ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ಎರಡು ಮತ್ತು ನಾಲ್ಕನೇ ಶನಿವಾರಗಳು ರಜಾ ದಿನವಾಗಿವೆ. ಆದ್ದರಿಂದ ಸೋಮವಾರ ಮತ್ತು ಶುಕ್ರವಾರದವರೆಗೆ ಕೆಲಸದ ಸಮಯ ಹೆಚ್ಚಿಸಿ, ಉಳಿದ ಶನಿವಾರ ರಜಾ ದಿನಗಳಾಗಿ ಘೋಷಿಸಲಾಗುವುದರಿಂದ ಬ್ಯಾಂಕಿಂಗ್ ಸೇವೆಗಳನ್ನು ಪ್ರವೇಶಿಸಲು ವಿವಿಧ ಪರ್ಯಾಯ ವಿತರಣಾ ಮಾರ್ಗಗಳು ಲಭ್ಯವಿರುವ ಕಾರಣ ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಸರ್ಕಾರ ಕೂಡಲೇ ಬ್ಯಾಂಕ್ ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಾರದಲ್ಲಿ ಐದು ದಿನ ಕೆಲಸ ನಿರ್ವಹಿ ಸಲು ಅನುಮೋದನೆ ನೀಡಬೇಕು. ಆ ನಿಟ್ಟಿನಲ್ಲಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ಸದಸ್ಯರಾದ ಕೆ.ಎಚ್.ಗಣೇಶ್, ಸಿ.ಎಂ .ಪ್ರದೀಪ್‌ಕುಮಾರ್, ಎಂ.ಟಿ.ಪ್ರಕಾಶ್, ಎನ್.ನಾಗರಾಜ್, ಚಂದನ್, ಅಧಿಕಾರಿಗಳ ಸಂಘದ ವಿ.ಗಂಗಾಧರ್, ನಿವೃತ್ತ ಬ್ಯಾಂಕ್‌ ನೌಕರ ಎಸ್.ಟಿ. ಹಾಲಪ್ಪ, ಶ್ರೀನಿವಾಸ್ ಹಾಗೂ ಸಿಬ್ಬಂದಿ ಹಾಜರಿದ್ದರು.

27 ಕೆಸಿಕೆಎಂ 1ಪ್ರತಿ ವಾರವು ಐದು ದಿನಗಳ ಕೆಲಸ ನಿರ್ವಹಿಸಲು ಸರ್ಕಾರ ಅನುಮೋದಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮುಖಂಡರು ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಮುಖ್ಯಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.