ಸಾರಾಂಶ
ಬ್ಯಾಂಕಿನ ಹಿರಿಯ ನಿರ್ದೇಶಕ ಲೋಕಪ್ಪಗೌಡ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ನಿರ್ದೇಶಕ ಗೋಪಾಲಗೌಡ ಮಾಡಿರುವ ಆರೋಪಗಳು ನಿರಾಧಾರ ಎಂದು ಬ್ಯಾಂಕಿನ ಹಿರಿಯ ನಿರ್ದೇಶಕ ಲೋಕಪ್ಪಗೌಡ ತಿಳಿಸಿದರು.
ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಈ ಪ್ರಕ್ಯೂರ್ಮೆಂಟ್ ಸೆಲ್ ನ ಯೋಜನಾ ನಿರ್ದೇಶಕರು ಈ ಟೆಂಡರ್ ಮೂಲಕ ಟೆಂಡರ್ ಕರೆದಿದ್ದರು. ಆದರೆ ಯಾರೂ ಸಹ ಬಿಡ್ ಮಾಡದ ಹಿನ್ನೆಲೆಯಲ್ಲಿ ಸಂಘದ ಕಟ್ಟಡ ನಿರ್ಮಾಣ ಸಮಿತಿ ತೀರ್ಮಾನದಂತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.101 ಸದಸ್ಯರಿಂದ ಷೇರು ಹಣ ₹50,500 ಸ್ವೀಕರಿಸಿ ಆರಂಭಗೊಂಡ ಸಂಘ ಇಂದು ₹40 ಕೋಟಿ ವ್ಯವಹಾರ ನಡೆಸುತ್ತಿದೆ. ₹ 1.22 ಕೋಟಿ ರೂ. ವೆಚ್ಚದಲ್ಲಿ ಸಂಘಕ್ಕೆ ಸ್ವಂತ ಆಡಳಿತ ಕಚೇರಿ ನಿರ್ಮಿಸಲಾಗಿದೆ. ಕಟ್ಟಡದ ಅಂದಾಜು ವೆಚ್ಚದ ಪ್ರಕಾರ ₹92 ಲಕ್ಷ ಅನುಮತಿ ಪಡೆದು, ₹30 ಲಕ್ಷ ಹೆಚ್ಚು ಖರ್ಚು ಮಾಡಲಾಗಿದೆ. ಲಿಫ್ಟ್, ಪ್ಯಾನಲ್ ಬೋರ್ಡ್, ಬೋರ್ ವೆಲ್, ಇಂಟೀರಿಯರ್ಸ್, ಫರ್ನೀಚರ್ಸ್, ಇಂಜಿನಿಯರ್ಸ್ ವೆಚ್ಚ, ಕಾಂಪೌಂಡ್ ನಿರ್ಮಾಣ, ಎಸಿ ಹೀಗೆ ಇತರೆ ₹30 ಲಕ್ಷ ಖರ್ಚು ಮಾಡಲಾಗಿದೆ. ಇದೆಲ್ಲದಕ್ಕೂ ಲೆಕ್ಕ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದಿಂದ ಸಾಲ ಮಂಜೂರಾತಿಗೆ ಸಂಬಂಧಿಸಿದಂತೆ ಸಾಲದ ಉಪ ಸಮಿತಿ ರಚಿಸಲಾಗಿದ್ದು, ಆ ಸಮಿತಿಯಲ್ಲಿ ಚರ್ಚಿಸಿ ಅದರಂತೆ ಸಾಲದ ನಿಯಮಾವಳಿಗಳನ್ನು ಪಾಲಿಸುತ್ತಾ ಬರಲಾಗಿದೆ. ಸಂಘದ ಬೈಲಾ ಪ್ರಕಾರ ಸದಸ್ಯರಿಗೆ ₹75 ಲಕ್ಷ ವರೆಗೂ ಸಾಲ ನೀಡಬಹುದಾಗಿದೆ. ಸಾಲದ ಉಪ ಸಮಿತಿಯಲ್ಲಿ ಪರಿಶೀಲನೆ ನಡೆಸದೆ ಯಾವುದೇ ಸಾಲವನ್ನು ನೀಡಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಸಂಘದ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಂಘದ ಸದಸ್ಯರಿಂದ ಸಾಲ ವಸೂಲಾತಿಯನ್ನು ಪ್ರತಿ ತಿಂಗಳು ಸಾಲಗಾರರಿಗೆ ನೋಟಿಸ್ ನೀಡುವ ಮೂಲಕ ಮತ್ತು ಸಂಘದ ವ್ಯವಸ್ಥಾಪಕರು ಸಾಲಗಾರರನ್ನು ಭೇಟಿ ಮಾಡುವ ಮೂಲಕ ವಸೂಲಾತಿ ಮಾಡಲಾಗುತ್ತಿದೆ. ಈ ಕಾರಣದಿಂದಲೇ ಸಂಘ ಆರಂಭದಿಂದ ಇದುವರೆಗೂ ಲಾಭದಲ್ಲಿಯೇ ನಡೆಯುತ್ತಿದೆ. ಜೊತೆಗೆ 2022ನೇ ಸಾಲಿನಲ್ಲಿ ಜಿಲ್ಲೆಯ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಯನ್ನು ಪಡೆದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಪ್ರಮುಖರಾದ ಎಂ.ಸಿ.ಶಿವಾನಂದಸ್ವಾಮಿ ಉಪಸ್ಥಿತರಿದ್ದರು. 9 ಕೆಸಿಕೆಎಂ 2