ಸಾರಾಂಶ
- ನೋವಿನ ಪತ್ರ, ಸಾವಿನ ಪತ್ರವೆಂದು ಡೆತ್‌ನೋಟ್ ಬರೆದ ಶಿರಮಗೊಂಡನಹಳ್ಳಿ ಚಿತ್ರಲಿಂಗ । ಕಠಿಣ ಕ್ರಮಕ್ಕೆ ಒತ್ತಾಯ
- 2 ತಿಂಗಳ ಸಾಲದ ಕಂತು ಕಟ್ಟದ್ದಕ್ಕೆ ಅವಾಚ್ಯ ನಿಂದಿಸಿ, ಕಿರುಕುಳ ನೀಡಿದ ಸಿಬ್ಬಂದಿ ಹೆಸರು, ಮೊಬೈಲ್ ಸಂಖ್ಯ ಉಲ್ಲೇಖ- - -
ಕನ್ನಡಪ್ರಭ ವಾರ್ತೆ ದಾವಣಗೆರೆಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ನಿಂದ ಪಡೆದಿದ್ದ ಸಾಲದ 2 ತಿಂಗಳ ಕಂತು ಕಟ್ಟಲಿಲ್ಲವೆಂಬ ಕಾರಣಕ್ಕೆ ಬ್ಯಾಂಕ್, ಫೈನಾನ್ಸ್ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ್ದರಿಂದ ನೊಂದ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಶಿರಮಗೊಂಡನಹಳ್ಳಿಯ ಚಿತ್ರಲಿಂಗ (31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನಿಗೆ ಪತ್ನಿ ಪವಿತ್ರಾ, ಮಗ ಧನುಷ್ ಇದ್ದಾರೆ.ಐಡಿಎಫ್‌ಸಿ, ಎಲ್ ಅಂಡ್ ಟಿ ಫೈನಾನ್ಸ್ ಹಾಗೂ ಉಜ್ಜಿವನ್ ಮೈಕ್ರೋ ಫೈನಾನ್ಸ್‌ನಲ್ಲಿ ಚಿತ್ರಲಿಂಗ ಸಾಲ ಮಾಡಿದ್ದ. 2 ತಿಂಗಳ ಸಾಲದ ಕಂತುಗಳ ಕಟ್ಟುವಂತೆ ಸಾಲ ವಸೂಲಾತಿ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ್ದರಿಂದ ಮಾನಸಿಕವಾಗಿ ನೊಂದು ಚಿತ್ರಲಿಂಗ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಚಿತ್ರಲಿಂಗ ಅವರು ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಉಜ್ಜೀವನ್ ಮೈಕ್ರೋ ಫೈನಾನ್ಸ್, ಐಡಿಎಫ್‌ಸಿ, ಎಲ್ ಅಂಡ್ ಟಿ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಮಾಡಿದ್ದಾಗಿಯೂ, ಖಾಸಗಿ ಬ್ಯಾಂಕ್, ಫೈನಾನ್ಸ್ ಸಿಬ್ಬಂದಿ ಮೊಬೈಲ್ ನಂಬರ್‌ಗಳನ್ನೂ ಡೆತ್‌ನೋಟಲ್ಲಿ ಬರೆದಿಟ್ಟಿದ್ದಾರೆ.ಪತ್ನಿ, ಮಗನ ಜೊತೆಗೆ ಶಿರಮಗೊಂಡನಹಳ್ಳಿಯಲ್ಲಿ ಚಿತ್ರಲಿಂಗ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮಗುವನ್ನು ಆಕೆಯ ಬಳಿ ಬಿಟ್ಟುಬಂದು ನಂತರ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ಉಜ್ಜೀವನ್ ಮೇಡಂ, ಎಲ್ ಅಂಡ್ ಟಿ ರಾಘವೇಂದ್ರ, ಐಡಿಎಫ್‌ಸಿ ಶರಣು ಎಂಬ ಹೆಸರುಗಳನ್ನು ಚಿತ್ರಲಿಂಗ ಉಲ್ಲೇಖಿಸಿದ್ದಾನೆ. ಆದರೆ, ಒಟ್ಟು ಎಷ್ಟು ಸಾಲ ಮಾಡಿದ್ದೇನೆ, ಕೈಗಡ ಸಾಲ ಮಾಡಿರುವ/ಮಾಡದಿರುವ ಬಗ್ಗೆ ಉಲ್ಲೇಖಿಸಿಲ್ಲ.
ಕಾನೂನು ಕ್ರಮಕ್ಕೆ ಕುಟುಂಬ ಒತ್ತಾಯ:ಉಜ್ಜೀವನ್ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ₹50 ಸಾವಿರ ಸಾಲ ಪಡೆದಿದ್ದ ಚಿತ್ರಲಿಂಗ, ಕೊನೆಯ ಕಂತಿನ ಹಣ ಕಟ್ಟಬೇಕಾಗಿತ್ತು. ಇದೇ ಉಜ್ಜೀವನ್ ಸಂಸ್ಥೆಯಲ್ಲಿ ಮತ್ತೊಂದು ಸಲ ₹75 ಸಾವಿರ ಸಾಲ ಪಡೆದಿದ್ದಾರೆ. ಅಲ್ಲದೇ, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ₹1 ಲಕ್ಷ, ಎಲ್ ಅಂಡ್ ಟಿ ಫೈನಾನ್ಸ್‌ನಲ್ಲೂ ₹1 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರು ಪಾವತಿಸಲು ಯಾವುದೇ ನೋಟಿಸ್ ಅನ್ನು ಬ್ಯಾಂಕ್‌ನವರಾಗಲೀ, ಉಜ್ಜೀವನ್ ಸಂಸ್ಥೆಯವರಾಗಲೀ ನೀಡಿರಲಿಲ್ಲ. ಸಾಲ ವಸೂಲಿಗೆ ಬಂದವರ ನಿಂದನೆ, ಕಿರುಕುಳ ತಾಳದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರಲಿಂಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕುಟುಂಬದವರು ಒತ್ತಾಯಿಸಿದರು.
ಮೃತ ಚಿತ್ರಲಿಂಗ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದ ಬಳಿ ತಂದಿದ್ದು, ಪತ್ನಿ ಪವಿತ್ರಾ, ಮಗ ಧನುಷ್, ಕುಟುಂಬ ವರ್ಗದ ರೋದನ ಮುಗಿಲುಮುಟ್ಟಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- - -
(ಬಾಕ್ಸ್) * ಮನಕಲಕುವ ಡೆತ್‌ನೋಟ್ ಡೆತ್ ನೋಟ್‌ನಲ್ಲಿ ತನ್ನ ಪತ್ನಿ ಹೆಸರಿನಲ್ಲಿ ಸಾಲ ಮಾಡಿದ್ದಕ್ಕೆ ತನ್ನನ್ನು ಕ್ಷಮಿಸುವಂತೆಯೂ, ಮನೆಯಲ್ಲಿ ಅಡುಗೆ ಮಾಡಿದ್ದೀನಿ ಊಟ ಮಾಡು ಎಂಬುದಾಗಿ ಚಿತ್ರಲಿಂಗ ಡೆತ್ ನೋಟ್‌ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ತನ್ನ ತಂದೆ, ತಾಯಿ, ತಮ್ಮ, ತಂಗಿ ಯಾರೂ ಮಣ್ಣು ಹಾಕಬಾರದು. ಪತ್ನಿ ತವರು ಮನೆಯವರು ಸಹ ತನಗೆ ಮಣ್ಣು ಹಾಕಬಾರದು. ತಾನು ಸತ್ತ ನಂತರ ದೇಹ ಪೋಸ್ಟ್ ಮಾರ್ಟಂ ಮಾಡಬಾರದು, ಅಗ್ನಿಸ್ಪರ್ಶ ಮಾಡದೇ, ಮಣ್ಣಿನಲ್ಲಿ ಹೂಳಬೇಕು ಎಂಬುದಾಗಿ ಬರೆದಿರುವುದು ಮನಕಲಕುವಂತಿದೆ.- - -
-5ಕೆಡಿವಿಜಿ1, 2, 3, 4, 5, 6.ಜೆಪಿಜಿ: ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಚಿತ್ರಲಿಂಗ, ಮೃತ ವ್ಯಕ್ತಿ.