ಸಭೆಗೆ ಬ್ಯಾಂಕ್‌ ಅಧಿಕಾರಿಗಳು ಗೈರು, ಜೋಶಿ ಗರಂ

| Published : Sep 14 2024, 01:49 AM IST

ಸಾರಾಂಶ

ಸಚಿವರ ಸಭೆಗೆ ಬರದಿದ್ದರೇ ಹೇಗೆ? ಹೀಗಾದರೆ, ಜಿಲ್ಲಾಡಳಿತ ನಿರ್ವಹಣೆ ಹೇಗೆ? ಮಾಡುತ್ತಿರಿ ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದ ಸಚಿವ ಜೋಶಿ, ಈ ಬಗ್ಗೆ ಆರ್‌ಬಿಐ ಅಧಿಕಾರಿಗಳಿಗೆ ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದರು.

ಧಾರವಾಡ:

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಬ್ಯಾಂಕರ್ಸ್ ಪರಿಶೀಲನೆ ಸಭೆಗೆ ಬಾರದ ಕೆಲವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗರಂ ಆದರು. ಸಭೆಗೆ ಬ್ಯಾಂಕಿನ ಮುಖ್ಯ ಅಧಿಕಾರಿಗಳು ಬರದೆ, ಸಿಬ್ಬಂದಿ ಕಳಿಸಿರುವುದಕ್ಕೆ ಕೆಂಡಾಮಂಡಲವಾದ ಸಚಿವರು, ಕರೆದ ಬ್ಯಾಂಕರ್ಸ್ ಸಭೆಗೆ ಮರ್ಯಾದೆ ಇಲ್ಲವೇ? ಸಚಿವರಿಗೆ ಕೊಡುವ ಗೌರವ ಇದೆನಾ? ಎಂದು ಪ್ರಶ್ನಿಸಿದರು.

ಸಚಿವರ ಸಭೆಗೆ ಬರದಿದ್ದರೇ ಹೇಗೆ? ಹೀಗಾದರೆ, ಜಿಲ್ಲಾಡಳಿತ ನಿರ್ವಹಣೆ ಹೇಗೆ? ಮಾಡುತ್ತಿರಿ ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದ ಸಚಿವ ಜೋಶಿ, ಈ ಬಗ್ಗೆ ಆರ್‌ಬಿಐ ಅಧಿಕಾರಿಗಳಿಗೆ ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದರು. ಅಲ್ಲದೇ, ಸಭೆಗೆ ಗೈರು ಉಳಿದ ವಿವಿಧ ಬ್ಯಾಂಕ್ ಅಧಿಕಾರಿಗಳು ಒಂದು ಗಂಟೆಯೊಳಗೆ ಸಭೆಗೆ ಬರಲು ತಾಕೀತು ಮಾಡಿದ ಸಚಿವರು, ಬ್ಯಾಂಕ್ ಅಧಿಕಾರಿಗಳ ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ ಸಹಿಸಲ್ಲ ಎಂದು ಕಿಡಿಕಾರಿದರು.

ಮಳೆ ಬಂದರೂ, ಎಕರೆಗೆ ಅರ್ಧ ಚೀಲ ಹೆಸರು ಕಾಳು ಆಗಿವೆ. ರೈತರಿಗೆ ಸಂಕಷ್ಟ ತಪ್ಪಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಬ್ಯಾಂಕರ್ಸ್ ರೈತರ ನೆರವಿಗೆ ಬರಬೇಕು ಎಂದು ರೈತ ಮುಖಂಡ ಸುಭಾಚಂದ್ರ ಪಾಟೀಲ ಸಭೆಗೆ ಆಗ್ರಹಿಸಿದರು. ಅಲ್ಲದೇ, ಕೆಲವು ಬ್ಯಾಂಕ್ ಬೆಳೆ ಸಾಲ ಕೊಡುತ್ತಿಲ್ಲ. ಇನ್ನೂ ಕೆಲ ಬ್ಯಾಂಕ್ ಕೇವಲ ₹ ೩ ಲಕ್ಷ ಮಾತ್ರ ಬೆಳೆಸಾಲ ಕೊಡುತ್ತಿವೆ. ರೈತರ ಜಮೀನಿಗೆ ಅನುಗುಣ ಬೆಳೆಸಾಲ ವಿತರಿಸಬೇಕು ಎಂದು ಸಭೆಗೆ ಪಾಟೀಲ ಒತ್ತಾಯಿಸಿದರು.

ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಬೆಳೆಸಾಲದ ಬಗ್ಗೆ ಜಾಗೃತಿ ಮೂಡಿಸಬೇಕು. ಬ್ಯಾಂಕಿನಲ್ಲಿ ನಾಮಫಲಕ ಹಾಕಬೇಕು. ಬೆಳೆಸಾಲ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಮಧ್ಯವರ್ತಿಗೆ, ಏಜೆನ್ಸಿಗೆ ಕಡಿವಾಣ ಹಾಕಬೇಕು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ವಿವಿಧ ಬ್ಯಾಂಕಿನ ಅಧಿಕಾರಿಗಳಾದ ಅರುಣಕುಮಾರ, ವಿಜಯ ಪಾಟೀಲ, ಮಯೂರ, ಅಜಿತ ಕಾಂಬಳೆ ಇದ್ದರು. ರೈತರಿಗೆ ನೆರವು ನೀಡಿ

ಕೃಷಿಕರ ಪರಿಸ್ಥಿತಿ ಬಹಳ ಕೆಟ್ಟಿದೆ. ಜನಸಂಖ್ಯೆ ಹೆಚ್ಚಳದಿಂದ ಜಮೀನು ಸಹ ಕ್ರಮೇಣ ಕ್ಷೀಣಿಸುತ್ತಿದೆ. ೧-೨ ಎಕರೆಯಲ್ಲಿ ಜೀವನ ನಿರ್ವಹಣೆ ಮಾಡುವ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಜೋಶಿ, ಇಂಥ ವೇಳೆ ಬ್ಯಾಂಕರ್ಸ್ ರೈತರಿಗೆ ಹಣಕಾಸಿನ ನೆರವು ನೀಡದಿದ್ದರೆ, ದೇಶದ ಆರ್ಥಿಕ ಪರಿಸ್ಥಿತಿಯೂ ದಿವಾಳಿ ಆಗಲಿದೆ. ಎಲ್ಲ ಬಾಂಕ್‌ಗಳು ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಮಾಡುವಂತೆ ಸೂಚಿಸಿದರು.