ಗ್ರಾಹಕನ ಆಸ್ತಿ ಹರಾಜಿಗೆ ಬ್ಯಾಂಕ್ ಸಂಚು: ಡಿಎಸ್‌ಎಸ್‌

| Published : Aug 09 2025, 02:03 AM IST

ಗ್ರಾಹಕನ ಆಸ್ತಿ ಹರಾಜಿಗೆ ಬ್ಯಾಂಕ್ ಸಂಚು: ಡಿಎಸ್‌ಎಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಲದ ಕಂತುಗಳನ್ನು ಕಟ್ಟಿದ್ದರೂ ಸಾಲ ಪಡೆದ ವ್ಯಕ್ತಿ ಗಣೇಶ್‌ ಎಂಬವರ ಆಸ್ತಿ ಹರಾಜು ಹಾಕುವ ಸಲುವಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಬ್ಯಾಂಕ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೇಲಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಒತ್ತಾಯಿಸಿದ್ದಾರೆ.

- 1 ಕಂತು ವಿಳಂಬ ನೆಪವೊಡ್ಡಿ ಗಣೇಶ್‌ ಎಂಬವರಿಗೆ ಕೆನರಾ ಬ್ಯಾಂಕ್‌ ಅಧಿಕಾರಿಗಳ ಕಿರಿಕಿರಿ: ರಾಘವೇಂದ್ರ ಆರೋಪ

- - -

- ಡಿಸಿ ಅನುಮತಿ ಇಲ್ಲದೇ ಆಸ್ತಿ ಹರಾಜು ಹಾಕಲು ಬ್ಯಾಂಕ್ ಅಧಿಕಾರಿಗಳ ಹುನ್ನಾರ - ಯಾವುದೇ ಆಸ್ತಿ ವಶಕ್ಕೆ ಜಿಲ್ಲಾಧಿಕಾರಿ ಬಳಿ ಕಾಯ್ದೆಯಂತೆ ಅರ್ಜಿ ಸಲ್ಲಿಸಬೇಕಾಗಿತ್ತು

- ಪ್ರತಿನಿತ್ಯ ಮೊಬೈಲ್ ಮೂಲಕ, ಖುದ್ದಾಗಿ ಭೇಟಿ ಮಾಡಿ ಆಸ್ತಿ ಮಾರುತ್ತೇವೆಂದು ಬೆದರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಲದ ಕಂತುಗಳನ್ನು ಕಟ್ಟಿದ್ದರೂ ಸಾಲ ಪಡೆದ ವ್ಯಕ್ತಿ ಗಣೇಶ್‌ ಎಂಬವರ ಆಸ್ತಿ ಹರಾಜು ಹಾಕುವ ಸಲುವಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಬ್ಯಾಂಕ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೇಲಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಚಾಮರಾಜ ಪೇಟೆಯ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಉದ್ಯಮ ಸ್ಥಾಪಿಸಲು ರಾಜೇಶ್ವರಿ ಎಂಟರ್ ಪ್ರೈಸಸ್‌ನ ಗಣೇಶ ಅವರು ಸಾಲದ ಹಣ ಪಡೆದಿದ್ದಾರೆ. ಈ ಸಾಲವನ್ನು ನಿಯಮಿತ ಕಂತುಗಳ ಮೂಲಕ ಕಟ್ಟುತ್ತಿದ್ದಾರೆ. 1 ಕಂತು ವಿಳಂಬ ನೆಪದಲ್ಲಿ ವ್ಯಕ್ತಿಯ ಆಸ್ತಿಯನ್ನು ಹರಾಜು ಹಾಕಲು ಬ್ಯಾಂಕ್‌ನ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದರು.

2022ರಲ್ಲಿ ಕೆನರಾ ಬ್ಯಾಂಕ್‌ ಚಾಮರಾಜಪೇಟೆ ಶಾಖೆಯ ಆಗಿನ ವ್ಯವಸ್ಥಾಪಕ ರವಿಕುಮಾರ ಜಾ ಎಂಬವರು ಗಣೇಶ್‌ ಅವರ ಸಂಸ್ಥೆಗೆ ₹30 ಲಕ್ಷ ಸಾಲವನ್ನು ಲಂಚ ಪಡೆದೇ ಮಂಜೂರು ಮಾಡಿದ್ದರು. ಸಾಲಕ್ಕೆ ಕೆಲ ಆಸ್ತಿಯ ಜಾಮೀನು ಪಡೆದಿದ್ದಾರೆ. ಈಗ ಕೇವಲ 1 ತಿಂಗಳ ಬಡ್ಡಿ ಪಾವತಿಸಲು ವಿಳಂಬವಾಗಿದೆ ಎಂಬ ಕಾರಣ ನೀಡಿ, ಅಡವಿಟ್ಟ ಆಸ್ತಿಯೆಂದು ಹರಾಜು ಮಾಡಲು, ಆಸ್ತಿ ವಶಕ್ಕೆ ಪಡೆಯಲು ಬ್ಯಾಂಕ್‌ನವರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಬ್ಯಾಂಕ್‌ನವರು ಯಾವುದೇ ಆಸ್ತಿ ವಶಕ್ಕೆ ಪಡೆಯಬೇಕೆಂದರೆ ದಾವಣಗೆರೆ ಜಿಲ್ಲಾಧಿಕಾರಿ ಬಳಿ ಕಾಯ್ದೆಯಂತೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಬ್ಯಾಂಕ್‌ ಅಧಿಕಾರಿಗಳು ಗಣೇಶ್‌ ಅವರ ಆಸ್ತಿ ಒಳ ಹಾಕಿಕೊಳ್ಳುವ ದುರುದ್ದೇಶದಿಂದ ಕಡಿಮೆ ದರದಲ್ಲಿ ಮಾರಾಟ ಮಾಡಿ, ಸ್ವಲಾಭ ಮಾಡಿಕೊಳ್ಳುಲು ಜಿಲ್ಲಾಧಿಕಾರಿ ಅವರಿಂದ ಪೊಜಿಷನ್‌ ಸರ್ಟಿಫಿಕೇಟ್ ಪಡೆಯದೇ, ಸಾಲಗಾರರಿಗೆ ಆಸ್ತಿ ಪೊಸಿಷನ್ ಪಡೆದಿದ್ದೇವೆ ಎಂದು ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರತಿನಿತ್ಯ ಮೊಬೈಲ್ ಮೂಲಕ, ಖುದ್ದಾಗಿ ಭೇಟಿ ಮಾಡಿ, ನಿಮ್ಮ ಆಸ್ತಿ ಮಾರುತ್ತೇವೆ. ನೀವೇನು ಮಾಡುತ್ತೀರಿ ಎಂಬುದಾಗಿ ಗಣೇಶ್‌ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದರು.

ನೊಂದ ಸಾಲಗಾರರು ಸಾಲ ನೀಡಿದ ದಾಖಲೆಗಳ ಪ್ರತಿಗಳನ್ನು ನೀಡಿ, ಜಿಲ್ಲಾಧಿಕಾರಿ ಆದೇಶ ಮಾಡಿದ ಪೊಸಿಷನ್‌ ಸರ್ಟಿಫಿಕೇಟ್ ನೀಡುವಂತೆ ಕೇಳಿದ್ದಾರೆ. ಆಗ ತಿಂಗಳು ಕಳೆದರೂ ಅವುಗಳ ಪ್ರತಿ ನೀಡಿಲ್ಲ. ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ದೂರು ನೀಡಿದಾಗ ಬ್ಯಾಂಕ್ ಅಧಿಕಾರಿಗಳು ಪೊಸಿಷನ್ ಪ್ರಮಾಣಪತ್ರ ನೀಡುವಂತೆ ಅರ್ಜಿಯನ್ನೇ ನೀಡಿಲ್ಲ ಎಂಬ ವಿಚಾರ ಗೊತ್ತಾಗಿದೆ. ಬ್ಯಾಂಕ್ ಅಧಿಕಾರಿಗಳು ಅಧಿಕಾರ ಇಲ್ಲದೆಯೇ ಸಾಲಗಾರರ ಆಸ್ತಿ ಪೊಸಿಷನ್ ಮಾಡುವ ಸಲುವಾಗಿ ಸಾಲಗಾರರನ್ನು ಕತ್ತಲಲ್ಲಿಟ್ಟು, ಕಾಡಿಸುವ ಪರಿ ಇದಾಗಿದೆ ಎಂದು ರಾಘವೇಂದ್ರ ಕಡೇಮನಿ ದೂರಿದರು.

ಸುದ್ದಿಗೋಷ್ಠಿಯಲ್ಲಿ ನೊಂದ ಗ್ರಾಹಕ ಗಣೇಶ, ಆರ್.ಪ್ರಭಾಕರ ಪಾಂಡೋಮಟ್ಟಿ, ಎಂ.ರವಿ ಕೆಟಿಜೆ ನಗರ, ಎಚ್.ಮಲ್ಲಿಕಾರ್ಜುನ ವಂದಾಲಿ, ಎಸ್.ಜಿ. ವೆಂಕಟೇಶ ಬಾಬು ಇತರರು ಇದ್ದರು.

- - -

(ಬಾಕ್ಸ್‌) * ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಮವಾಗಲಿಸಾಲಗಾರನಿಗೆ ಮಾನಸಿಕ ಹಿಂಸೆ ನೀಡಿ, ಮೋದ ಮಾಡಿದ ಬ್ಯಾಂಕ್‌ ಶಾಖಾ ಮ್ಯಾನೇಜರ್‌ ಶ್ರೀನಾಥ, ಕಾನೂನು ವ್ಯವಸ್ಥಾಪಕ ಪಿ.ಎಸ್.ಮನೋಜ, ಎಜಿಎಂ ಎಲ್ಲರನ್ನೂ ತಕ್ಷಣ ಅಮಾನತುಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಬ್ಯಾಂಕ್‌ನ ಎಂ.ಡಿ.ಗೆ ಪತ್ರ ಬರೆದಿದ್ದರೂ ಅಧಿಕಾರಿ ವರ್ಗದ ಮೇಲೆ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ. ಇದೇ ಧೋರಣೆ ಮುಂದುವರಿದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಘವೇಂದ್ರ ಎಚ್ಚರಿಸಿದರು.

- - -

-8ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.