ಸಾರಾಂಶ
ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಅನಕ್ಷರಸ್ಥ ಗ್ರಾಹಕನಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದ ವ್ಯಕ್ತಿಯಿಂದ ಹಣವನ್ನು ಮರಳಿಸಿದ ಘಟನೆ ಬನಹಟ್ಟಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಅನಕ್ಷರಸ್ಥ ಗ್ರಾಹಕನಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದ ವ್ಯಕ್ತಿಯಿಂದ ಹಣವನ್ನು ಮರಳಿಸಿದ ಘಟನೆ ಬನಹಟ್ಟಿಯಲ್ಲಿ ನಡೆದಿದೆ. ಇಲ್ಲಿನ ಕರ್ನಾಟಕ ಬ್ಯಾಂಕಿನಲ್ಲಿ ಗುತ್ತಿಗೆ ನೌಕರನಾಗಿ ಕ್ರೆಡಿಟ್ ಕಾರ್ಡ್ ಸೇವೆಯಲ್ಲಿದ್ದ ದೇವೇಂದ್ರ ಮೈತ್ರಿ ಎಂಬಾತ ಬಾಜಿರಾವ್ ಮಗದುಮ್ ಎಂಬ ಗ್ರಾಹಕನಿಗೆ ಒಂದುವರೆ ವರ್ಷದಿಂದ ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಅವಧಿ ಮುಗಿದಿದೆ. ನವೀಕರಣ ಮಾಡಬೇಕು. ಇಲ್ಲದಿದ್ದರೆ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ಹೆದರಿಸಿದ್ದ. ಇದನ್ನು ನಂಬಿದ ಗ್ರಾಹಕನ ಕಾರ್ಡ್ ಮಾಹಿತಿ ಹಾಗೂ ಒಟಿಪಿ ನೀಡಿ ₹೫೦ ಸಾವಿರದಂತೆ ೩ ಬಾರಿ ಒಟ್ಟು ₹೧.೪೭.೨೦೦ ಎಗರಿಸಿದ್ದಾನೆ.ಪ್ರಕರಣ ಬೆಳಕಿಗೆ ಬಂದಿದ್ಹೇಗೆ?: ಒಂದೂವರೆ ವರ್ಷದಿಂದ ಬಾಬುರಾವ್ ಮಗದುಮ್ ಮೊಬೈಲ್‌ಗಳಲ್ಲಿ ಯಾವುದೇ ಮೆಸೇಜ್ ನೋಡಿಕೊಂಡಿಲ್ಲ. ಮಾ.4ರಂದು ತಕ್ಷಣವೇ ಹಣ ತುಂಬಬೇಕೆಂದು ಬ್ಯಾಂಕಿನಿಂದ ನೋಟಿಸ್ ಬಂದಾಗ ವಿಚಲಿತನಾಗಿ ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರು. ಶಾಖಾ ವ್ಯವಸ್ಥಾಪಕರು ವಂಚನೆ ಬಗ್ಗೆ ಪ್ರಧಾನ ಕಚೇರಿಗೆ ಮಾಹಿತಿ ನೀಡಿದ್ದು, ವಂಚನೆಯಲ್ಲಿ ಬ್ಯಾಂಕಿನ ಗುತ್ತಿಗೆ ಸಿಬ್ಬಂದಿ ದೇವೇಂದ್ರ ಮೈತ್ರಿ ಕೈಚಳಕ ಇರುವುದು ದೃಢವಾಗಿದೆ. ತಪ್ಪೊಪ್ಪಿಕೊಂಡ ಸಿಬ್ಬಂದಿ ಪೂರ್ತಿ ಹಣವನ್ನು ವಂಚನೆಗೊಳಗಾದ ಮಗದುಮ್ ಖಾತೆಗೆ ಜಮಾ ಮಾಡಿದರು.
ಇನ್ನಷ್ಟು ಜನರಿಗೆ ಇಂಥದೇ ರೀತಿಯಲ್ಲಿ ವಂಚನೆ ಮಾಡಿರುವ ಶಂಕೆಯಿದ್ದು, ಇದೆಲ್ಲದರ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಗ್ರಾಹಕನಿಗೆ ನ್ಯಾಯ ಒದಗಿಸಿದ ವ್ಯವಸ್ಥಾಪಕ ಪ್ರವೀಣ ಕಾಲತಿಪ್ಪಿಯವರನ್ನು ಸೋಮವಾರ ನಾಗರಿಕರು ಸನ್ಮಾನಿಸಿದರು.