ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾವನ್ನು ಕುಣಿಮೆಳ್ಳಳ್ಳಿಗೆ ಸ್ಥಳಾಂತರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದ್ದು, ಇನ್ನು ಮುಂದೆ ಬಂಕಾಪುರ ಟೋಲ್ ಬಂದಾಗಲಿದೆ.ನಗರ ಪ್ರದೇಶಗಳಲ್ಲಿ ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರ ನಿಯಮ ಬಂಕಾಪುರದ ಟೋಲ್ ಗೇಟ್‌ಗೆ ಅನ್ವಯವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಸ್ಥಳಾಂತರಿಸಲಾಗುತ್ತಿದೆ. ಬಂಕಾಪುರ ಟೋಲ್ ಗೇಟ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ತುರ್ತಾಗಿ ಸ್ಥಳಾಂತರ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನಿರ್ದೇಶನದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬಂಕಾಪುರ ಟೋಲ್ ಪ್ಲಾಜಾವನ್ನು ಕುಣಿಮೆಳ್ಳಳ್ಳಿ ಬಳಿ ಸ್ಥಳಾಂತರಿಸಲು ನಿರ್ಧರಿಸಿದೆ.
ಬಂಕಾಪುರದಿಂದ ಹಾವೇರಿ ಕಡೆಗೆ 5 ಕಿಲೋಮೀಟರ್ ಅಂತರದಲ್ಲಿ ಕುಣಿಮೆಳ್ಳಳ್ಳಿ ಇದ್ದು, ಇನ್ನು ಮುಂದೆ ಬಂಕಾಪುರ ಟೋಲ್ ಇತಿಹಾಸದ ಪುಟ ಸೇರಲಿದೆ.ಬಂಕಾಪುರ ಬಳಿಯ ಟೋಲ್ ಪ್ಲಾಜಾ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಲಿದ್ದು, ಪಟ್ಟಣದ ಸಮೀಪದಲ್ಲಿಯೇ ಟೋಲ್‌ಗೇಟ್ ಇರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಡಿಮೆ ದೂರ ಪ್ರಯಾಣಿಸಬೇಕಾದರೂ ಟೋಲ್ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಲ್ಲದೇ ಪದೇ ಪದೇ ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ವಾಗ್ವಾದಗಳು ಸಾಮಾನ್ಯವಾಗಿತ್ತು. ಸ್ಥಳೀಯರಾದರೂ ಟೋಲ್‌ನಲ್ಲಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಟೋಲ್ ಪ್ಲಾಜಾವನ್ನು ಕುಣಿಮೆಳ್ಳಳ್ಳಿ ಬಳಿ ಸ್ಥಳಾಂತರಿಸಲು ನಿರ್ಧರಿಸಿ, ಈಗಾಗಲೇ ಆಡಳಿತಾತ್ಮಕ ಸೌಲಭ್ಯಗಳು ಮತ್ತು ಸಂಬಂಧಿತ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ಉದ್ದೇಶಿತ ಪ್ಲಾಜಾದಲ್ಲಿ 12 ಟೋಲ್ ಲೇನ್ ಇರಲಿದ್ದು, ಇದನ್ನು ನಿರ್ಮಿಸಲು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿ ಅಧಿಕಾರಿಗಳ ಆದೇಶದ ಪ್ರಕಾರ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ.
ಸ್ಥಳಾಂತರ ಏಕೆ?: ನಗರ ಪ್ರದೇಶದಿಂದ 6-7 ಕಿಮೀ ವ್ಯಾಪ್ತಿಯಲ್ಲಿ ಟೋಲ್ ಪ್ಲಾಜಾ ನಿರ್ಬಂಧಿಸುವ ನೀತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಜಾರಿಗೆ ತಂದಿದೆ. ಆದರೆ ಬಂಕಾಪುರ ಟೋಲ್ ಈ ವ್ಯಾಪ್ತಿಯಲ್ಲಿ ಬರುತ್ತಿತ್ತು. ಟೋಲ್ ಪ್ಲಾಜಾಗಳ ಸಮೀಪದ ನಗರಗಳ ಸಾರ್ವಜನಿಕರು ಹಾಗೂ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಂಕಾಪುರದ ನಿವಾಸಿಗಳಿಗೂ ಇದರಿಂದ ಅನುಕೂಲವಾಗಲಿದೆ.ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನಿರ್ದೇಶನದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಬಂಕಾಪುರದ ಸಮೀಪದಲ್ಲಿದ್ದ ಟೋಲ್ ಪ್ಲಾಜಾವನ್ನು ಕುಣಿಮೆಳ್ಳಳ್ಳಿ ಬಳಿ ಸ್ಥಳಾಂತರಿಸಲು ನಿರ್ಧರಿಸಿದೆ. ಹೊಸದಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಅಗತ್ಯವಿಲ್ಲ. 12 ಲೇನ್ ಟೋಲ್ ಪ್ಲಾಜಾವನ್ನು ನಿರ್ಮಿಸುವ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿ, ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ಧಾರವಾಡ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಭುವನೇಶ ಶುಕ್ಲಾ ಹೇಳುತ್ತಾರೆ.ಬಂಕಾಪುರದ ನಿವಾಸಿಗಳಾದರೂ ನಮಗೆ ಟೋಲ್‌ನಲ್ಲಿ ನಿತ್ಯವೂ ಕಿರಿಕಿರಿ ಎದುರಿಸಬೇಕಾಗಿತ್ತು. ಪಟ್ಟಣದಿಂದ ಸ್ವಲ್ಪ ದೂರ ಹೋಗಬೇಕಿದ್ದರೂ ಟೋಲ್ ಪಾವತಿಸಬೇಕಿತ್ತು. ಇನ್ನು ಮುಂದೆ ಟೋಲ್ ಸ್ಥಳಾಂತರವಾದರೆ ಸ್ವಲ್ಪಮಟ್ಟಿಗೆ ಅನುಕೂಲವಾಗಲಿದೆ. ಆದರೆ, ಟೋಲ್ ಅಕ್ಕಪಕ್ಕ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಸ್ಥಳೀಯರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಬಂಕಾಪುರ ನಿವಾಸಿ ಪ್ರಕಾಶ ಕೊಳಲ ಹೇಳುತ್ತಾರೆ.