ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಿದ್ದ 6,203 ಕೋಟಿ ರು. ಮೂಲ ಸಾಲದ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು 14,131.6 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪಡೆದಿರುವಾಗ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್ (ಯುಬಿಎಲ್) ಷೇರುಗಳ ಮೇಲೆ ಸಾಧಿಸಿದ್ದ ಹಕ್ಕು ಸಾಧಿಸುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮಿ ವಿಜಯ್ ಮಲ್ಯ ಅವರ ಒಡೆತನದ ಕಿಂಗ್ಫಿಶರ್ ಏರ್ಲೈನ್ಸ್ಗೆ ನೀಡಿದ್ದ 6,203 ಕೋಟಿ ರು. ಮೂಲ ಸಾಲದ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು 14,131.6 ಕೋಟಿ ರು.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪಡೆದಿರುವಾಗ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್ (ಯುಬಿಎಲ್) ಷೇರುಗಳ ಮೇಲೆ ಸಾಧಿಸಿದ್ದ ಹಕ್ಕು ಸಾಧಿಸುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಅಲ್ಲದೆ, ಸಾಲ ವಸೂಲಾತಿ ನ್ಯಾಯಾಧಿಕರಣ ಮತ್ತು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧಿಕರಣಗಳಲ್ಲಿ ಯುಬಿಎಲ್ ಷೇರುಗಳ ಮೇಲೆ ಬ್ಯಾಂಕ್ಗಳ ಒಕ್ಕೂಟ ಸಾಧಿಸಿದ್ದ ಹಕ್ಕನ್ನು ರದ್ದುಪಡಿಸಿದೆ.
ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್ಟಿ) ಮತ್ತು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧಿಕರಣಗಳ ಆದೇಶ ಪ್ರಶ್ನಿಸಿ ನೆದರ್ಲ್ಯಾಂಡ್ಸ್ನ ‘ಡಿಯಾಜಿಯೋ ಹೋಲ್ಡಿಂಗ್ಸ್’ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಇನ್ನೂ ‘ವ್ಯಾಟ್ಸನ್ ಲಿಮಿಟೆಡ್’ ಸಂಸ್ಥೆ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗೆ ಪಾವತಿಸಬೇಕಿದ್ದ ಸಾಲಕ್ಕೆ ಡಿಯಾಜಿಯೋ ಕಂಪನಿಯು ಜಾಮೀನುದಾರನಾಗಿತ್ತು. ವ್ಯಾಟ್ಸನ್ ಕಂಪನಿ ಸಾಲ ಮರುಪಾವತಿಸಲು ವಿಫಲವಾದಾಗ ಡಿಯಾಜಿಯೋ ಸಂಸ್ಥೆಯು 140.97 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಎಸ್ಸಿಬಿ ಬ್ಯಾಂಕ್ಗೆ ಪಾವತಿಸಿ, ಆ ಷೇರುಗಳ ಮೇಲಿನ ಮೊದಲ ಆದ್ಯತೆಯ ಹಕ್ಕನ್ನು ಕಾನೂನುಬದ್ಧವಾಗಿ ಪಡೆದುಕೊಂಡಿದೆ ಎಂದು ಪೀಠ ತಿಳಿಸಿದೆ.ವಿಜಯ್ ಮಲ್ಯ ಹಾಗೂ ಅವರ ಪುತ್ರ ಸಿದ್ಧಾರ್ಥ್ ಮಲ್ಯ ಜಂಟಿಯಾಗಿ ಹೊಂದಿರುವ 1,04,64,288 ಯುಬಿಎಲ್ ಷೇರುಗಳ ಮೇಲೆ ಮಲ್ಯ ಅವರ ವೈಯಕ್ತಿಕ ಗ್ಯಾರಂಟಿ ಆಧಾರದ ಮೇಲೆ ಬ್ಯಾಂಕ್ಗಳು ಹಕ್ಕು ಮಂಡಿಸುವಂತಿಲ್ಲ. ಸಿದ್ಧಾರ್ಥ್ ಮಲ್ಯ ಅವರು ಬ್ಯಾಂಕ್ಗಳೊಂದಿಗಿನ ಮಾಸ್ಟರ್ ಸಾಲ ಮರುರಚನೆ ಒಪ್ಪಂದಕ್ಕೆ ಸಹಿ ಮಾಡಿರಲಿಲ್ಲ ಎಂದು ತಿಳಿಸಿದ ಹೈಕೋರ್ಟ್ ನ್ಯಾಯಾಧಿಕರಣಗಳ ಆದೇಶ ರದ್ದುಗೊಳಿಸಿದೆ.
ಪ್ರಕರಣದ ವಿವರ:ವಿಜಯ್ ಮಲ್ಯ ಅವರ ಉದ್ಯಮ ಸಂಸ್ಥೆಯಾದ ವ್ಯಾಟ್ಸನ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ನಲ್ಲಿದ್ದ ಸಾಲ ಮರುಪಾವತಿಸಲು 2013ರಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನಿಂದ 135 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆದಿತ್ತು. ಈ ಸಾಲಕ್ಕೆ ಮಲ್ಯ ಅವರು ತಮಗೆ ಹಾಗೂ ತಮ್ಮ ಪುತ್ರ ಸಿದ್ಧಾರ್ಥ್ ಮಲ್ಯ ಅವರಿಗೆ ಸೇರಿದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ನಲ್ಲಿ ಶೇ.7.92 ರಷ್ಟಿದ್ದ 2.15 ಕೋಟಿಗೂ ಹೆಚ್ಚು ಷೇರುಗಳನ್ನು ಎಸ್ಸಿಬಿ ಬ್ಯಾಂಕ್ಗೆ ಅಡಮಾನವಿಟ್ಟಿದ್ದರು. ಇತ್ತ ಕಿಂಗ್ಫಿಶರ್ ಏರ್ಲೈನ್ಸ್ ಬ್ಯಾಂಕ್ಗಳ ಒಕ್ಕೂಟಕ್ಕೆ ಸಾಲ ಮರುಪಾವತಿಸಲು ವಿಫಲವಾದಾಗ, ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು ಈ ಯುಬಿಎಲ್ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಡಿಆರ್ಟಿ ಮೆಟ್ಟಿಲೇರಿ ಆದೇಶ ಪಡೆದಿತ್ತು.
ನಿಷ್ಕ್ರಿಯಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ ಲಿಮಿಟೆಡ್ಗೆ ನೀಡಲಾದ 6,203 ಕೋಟಿ ಸಾಲಕ್ಕೆ ಸಂಬಂಧಿಸಿ ಬ್ಯಾಂಕ್ಗಳ ಒಕ್ಕೂಟದ ಹಕ್ಕುಗಳಿಗೆ ಅಂತಿಮ ಇತ್ಯರ್ಥ ನೀಡುವ ಪ್ರಕ್ರಿಯೆಗೆ ಡಾ.ವಿಜಯ್ ಮಲ್ಯ ಅವರ ಐಷಾರಾಮಿ ಜೀವನಶೈಲಿ, ಅತಿಯಾದ ವೈಯಕ್ತಿಕ ಭೋಗ ಮತ್ತು ವೈಯಕ್ತಿಕ ಪ್ರತಿಷ್ಠೆಯ ವ್ಯಾಮೋಹ ಅಡ್ಡಿಯಾಗುತ್ತಿವೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಪೀಠ ಹೇಳಿದೆ.