ಸಾರಾಂಶ
ಹಾವೇರಿ: ರೈತರಿಗೆ ಸಾಲ ನೀಡುವಾಗ ಅನಗತ್ಯ ಅಲೆದಾಡುವುದನ್ನು ಬ್ಯಾಂಕುಗಳು ತಪ್ಪಿಸಬೇಕು. ಬ್ಯಾಂಕುಗಳು ರೈತಸ್ನೇಹಿ ವ್ಯವಹಾರ ಮಾಡಬೇಕು. ಅದಕ್ಕಾಗಿ ಪ್ರತಿ ಬ್ಯಾಂಕಿನಲ್ಲಿ ಪಿಆರ್‌ಒ ನೇಮಿಸಿಕೊಂಡು ರೈತರಿಗೆ ಸಹಾಯ ಮಾಡಬೇಕು. ಸಾಲದ ಅರ್ಜಿ ಫಾರಂ ಭರ್ತಿಯಿಂದ ಹಿಡಿದು ದಾಖಲೆ ನೀಡುವುದಕ್ಕಾಗಿಯೇ ಅಲೆದಾಡಿ ಚಪ್ಪಲಿ ಹರಿದು ಹೋಗುವಂತಹ ಪರಿಸ್ಥಿತಿ ತಪ್ಪಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಮಿತಿ ಹಾಗೂ ಬ್ಯಾಂಕುಗಳ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬ್ಯಾಂಕ್‌ಗೆ ಬರುವ ರೈತರು ಹಾಗೂ ಉದ್ಯಮಿಗಳು ಇಬ್ಬರೂ ನಿಮ್ಮ ಗ್ರಾಹಕರು. ಉದ್ಯಮಿಗೆ ಸಾಲ ಪಡೆಯುವ ಮಾಹಿತಿ ಗೊತ್ತಿರುತ್ತದೆ. ಆದರೆ ರೈತರಿಗೆ ಮಾಹಿತಿ ಇರುವುದಿಲ್ಲ, ಹೀಗಾಗಿ ಸಾಲದ ಅರ್ಜಿ ಫಾರಂ ಭರ್ತಿ ಮಾಡುವುದು ಸೇರಿದಂತೆ ಎಲ್ಲ ಅಗತ್ಯ ಮಾಹಿತಿಗಳನ್ನು ನೀಡಬೇಕು. ಬ್ಯಾಂಕುಗಳಲ್ಲಿ ಸಹಾನುಭೂತಿಯಿಂದ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಸಿಡಿ ರೇಶಿಯೋ ಪಾಲಿಸದ್ದಕ್ಕೆ ಗರಂ: ಕ್ರೆಡಿಟ್ ಹಾಗೂ ಠೇವಣಿ ಅನುಪಾತ(ಸಿಡಿ ರೇಶಿಯೋ) ಸಮರ್ಪಕವಾಗಿರಬೇಕು. ಆದರೆ, ಕರ್ನಾಟಕ ಬ್ಯಾಂಕ್‌ನ ಪ್ರಮಾಣ ತೀರಾ ಕಡಿಮೆ ಇದೆ. ಎಲ್ಲ ಜಿಲ್ಲೆಗಳಿಂದ ಠೇವಣಿ ಪಡೆದು ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು ಸಾಲ ವಿತರಣೆ ಮಾಡುತ್ತಿದೆ. ಜಿಲ್ಲೆಯಲ್ಲಿ ಕರ್ನಾಟಕ ಬ್ಯಾಂಕ್‌ನ ಕಾರ್ಯವೈಖರಿ ಹಾಗೂ ಸಿಡಿ ಅನುಪಾತದ ಕುರಿತು ಬ್ಯಾಂಕ್‌ನ ಆಡಳಿತ ಮಂಡಳಿಗೆ ಪತ್ರ ಬರೆಯಿರಿ. ಸಿಡಿ ಅನುಪಾತವನ್ನು ಸಮರ್ಪಕವಾಗಿ ನಿರ್ವಹಿಸದ ಬ್ಯಾಂಕ್‌ಗಳಲ್ಲಿ ಸರ್ಕಾರದ ಹಣ ಠೇವಣಿ ಇದ್ದರೆ ಅದನ್ನು ತೆಗೆದು ಬೇರೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಬೇಡಿಕೆ ಇರುವಷ್ಟು ಸಾಲ ಕೊಡಿ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡ ಕೆಸಿಸಿ ಬ್ಯಾಂಕ್‌ನಲ್ಲಿ ಹಾವೇರಿ ಜಿಲ್ಲೆಯ ರೈತರು ₹374 ಕೋಟಿ ಠೇವಣಿ ಇಟ್ಟಿದ್ದರೂ ₹231 ಕೋಟಿ ಕೃಷಿ ಸಾಲ ವಿತರಣೆ ಮಾಡಿದ್ದೀರಿ. ಗದಗ ಜಿಲ್ಲೆಯಲ್ಲಿ ಠೇವಣಿಗಿಂತಲೂ ಹೆಚ್ಚು ಸಾಲ ಕೊಟ್ಟಿದ್ದೀರಿ. ಜಿಲ್ಲೆಯಲ್ಲಿ ರೈತರಿಂದ ಎಷ್ಟು ಪ್ರಮಾಣದಲ್ಲಿ ಸಾಲ ಬೇಡಿಕೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ಸಾಲ ಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸಬೇಕು. ಕಚೇರಿ ಆರಂಭಿಸಲು ನಬಾರ್ಡ್, ಆರ್‌ಬಿಐ ಒಪ್ಪಿಗೆ ಕೊಟ್ಟಿದೆ. ಕಾರಣ ಪೂರ್ಣಪ್ರಮಾಣದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳನ್ನು ಒದಗಿಸಬೇಕು ಎಂದರು. ಕೆಎಸ್‌ಎಫ್‌ಸಿ ಮುಚ್ಚಿಬಿಡಿ: ಜಿಲ್ಲೆಯಲ್ಲಿ ಕೆಎಸ್‌ಎಫ್‌ಸಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ನವ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನೂ ನೀಡುತ್ತಿಲ್ಲ. ಹೀಗಾಗಿ ಅದನ್ನು ಮುಚ್ಚಿಬಿಟ್ಟು ನೀವು ಬೇರೆ ಕಡೆ ಹೋಗಿ ಬಿಡಿ ಎಂದು ಕೆಎಸ್‌ಎಫ್‌ಸಿ ಬ್ಯಾಂಕ್‌ನ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಗೂಂಡಾಗಳನ್ನು ಇಟ್ಟುಕೊಂಡಿದ್ದೀರಾ?: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಒತ್ತಾಯಿಸುವಂತಿಲ್ಲ, ಕಿರುಕುಳ ನೀಡುವಂತಿಲ್ಲ, ಮನೆಗಳಿಗೆ ಕೀಲಿ ಹಾಕುವ ಅಧಿಕಾರ ನಿಮಗಿಲ್ಲ. ಸಾಲ ಕೊಡುವಾಗ ಅವರ ಆರ್ಥಿಕ ಸ್ಥಿತಿ ನೋಡಿಕೊಂಡು ಸಾಲ ನೀಡಬೇಕು. ವಸೂಲಾತಿಗೆ ಗುಂಡಾಗಳನ್ನು ನೇಮಿಸಿಕೊಂಡಿದ್ದೀರಾ? ನಿಮಗೆ ಪೊಲೀಸರೊಂದಿಗೆ ಉತ್ತಮ ಸ್ನೇಹವಿದ್ದಿರಬಹುದು ಅಲ್ಲವೇ ಎಂದು ಪ್ರಶ್ನಿಸಿದ ಸಂಸದ ಬೊಮ್ಮಾಯಿ, ಆರ್‌ಬಿಐ ಮಾರ್ಗಸೂಚಿಯನ್ವಯ ವ್ಯವಹಾರ ಮಾಡಬೇಕು. ಮೈಕ್ರೋ ಫೈನಾನ್ಸ್‌ಗಳ ಚಲನ-ವಲನಗಳ ಮೇಲೆ ನಿಗಾ ವಹಿಸಲು ಒಂದು ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಎಚ್ಚರಿಕೆಯಿಂದ ಕೆಲಸ ಮಾಡಿ: ನಮ್ಮ ಸರ್ಕಾರ ಜಾರಿಗೊಳಿಸಿದ್ದ ಅಮೃತ ಕುರಿಗಾಹಿ ಯೋಜನೆ ಈಗ ನಿಂತು ಹೋಗಿದೆ. ನಾವು ನಿಗದಿಪಡಿಸಿದ್ದ ಗುರಿಯನ್ನಾದರೂ ತಲುಪಿ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಿರಿ. ಜಿಲ್ಲೆಯ ರೈತರಿಗೆ ಬೆಳೆವಿಮೆ ಕೈತಪ್ಪದಂತೆ ಕೃಷಿ, ಕಂದಾಯ, ತೋಟಗಾರಿಕೆ, ಅಂಕಿಸಂಖ್ಯೆ ಇಲಾಖೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಕಳೆದ ವರ್ಷ ಬೆಳೆ ಕಟಾವು ಪರೀಕ್ಷೆ ವೇಳೆ ಈ ಇಲಾಖೆಗಳು ಮಾಡಿದ್ದ ಎಡವಟ್ಟಿನ ವಿಡಿಯೋ ಕೇಂದ್ರಕ್ಕೆ ತಲುಪಿದೆ. ನಿಮ್ಮ ಎಡವಟ್ಟಿನಿಂದಾಗಿ ರೈತರಿಗೆ ಬರಬೇಕಾದ ₹63 ಕೋಟಿ ಕೈತಪ್ಪಿ ಹೋಗಿತ್ತು. ನಾವು ಒತ್ತಡ ಹಾಕಿ ₹50 ಕೋಟಿ ಬರುವಂತೆ ನೋಡಿಕೊಂಡಿದ್ದೇವೆ. ಈ ವರ್ಷ ಅಂತಹ ನ್ಯೂನತೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಕೆವಿಜಿ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಸೋಮಶೇಖರ್, ನಬಾರ್ಡ್ ಅಧಿಕಾರಿ ರಂಗನಾಥ್, ಯುನಿಯನ್ ಬ್ಯಾಂಕ್‌ನ ದೀಪಕ್ ಕುಮಾರ್, ಪಂಕಜಕುಮಾರ, ಬಸವರಾಜ ಬೆಲ್ಲದ ಇತರ ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು. ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಅಣ್ಣಯ್ಯ ಅವರು ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.