ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬ್ಯಾಂಕುಗಳು ಆದ್ಯತಾ ವಲಯಗಳಾದ ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಡಿ ಉತ್ತಮ ಸಾಧನೆ ತೋರಬೇಕು. ಸಿಡಿ ಅನುಪಾತವನ್ನು ಹೆಚ್ಚಿಸಬೇಕು ಹಾಗೂ ಫಲಾನುಭವಿಗಳಿಗೆ ಅನುಕೂಲಕರವಾಗಿ ವರ್ತಿಸಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಜಿ.ಪಂ.ಸಭಾಂಗಣದಲ್ಲಿ ಜು.15ರಂದು ಏರ್ಪಡಿಸಲಾಗಿದ್ದ ಬ್ಯಾಂಕುಗಳ ಡಿಸಿಸಿ ಮತ್ತು ಡಿಎಲ್‌ಆರ್‌ಸಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯ ಮೊದಲ ಕಂತಿನಲ್ಲಿ ಶೇ.91 ಜನರಿಗೆ ಅಂದರೆ 9925 ಫಲಾನುಭವಿಗಳಿಗೆ 10 ಸಾವಿರ ರು. ಸಾಲ ಸೌಲಭ್ಯ, ಈ 10 ಸಾವಿರ ತೀರಿಸಿದ ಫಲಾನುಭವಿಗಳಿಗೆ ಎರಡನೇ ಕಂತಿನಲ್ಲಿ 3408 ಜನರಿಗೆ ರು. 20 ಸಾವಿರ ಮತ್ತು ಮೂರನೇ ಕಂತಿನಲ್ಲಿ 937 ಫಲಾನುಭವಿಗಳಿಗೆ 50 ಸಾವಿರ ಸಾಲ ಸೌಲಭ್ಯ ವಿತರಣೆ ಯಾಗಿದೆ. ಮೊದಲ, ಎರಡನೇ ಮತ್ತು ಮೂರನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ ತೀರಾ ಕಡಿತವಾಗುತ್ತಾ ಬಂದಿದೆ. ಇದರಿಂದ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಇದಕ್ಕೆ ಸಕಾರಣ ನೀಡಿ, ಮುಂದಿನ ದಿನಗಳಲ್ಲಿ ಎರಡನೇ ಮತ್ತು ಮೂರನೇ ಕಂತಿನಲ್ಲೂ ಸಹ ಹೆಚ್ಚಿನ ಫಲಾನುಭವಿಗಳು ಸಾಲ ಸೌಲಭ್ಯ ಪಡೆಯುವಂತೆ ಬ್ಯಾಂಕುಗಳು ಕ್ರಮ ವಹಿಸಬೇಕೆಂದು ಸಂಸದರು ಸೂಚನೆ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಮಾತನಾಡಿ, ಪಿಎಂ ಸ್ವನಿಧಿ ಯೋಜನೆಯಡಿ ಬಡ್ಡಿದರ ಶೇ.11 ರಲ್ಲಿ ಶೇ.7 ಫಲಾನುಭವಿಗಳು ನೀಡಬೇಕು ಮತ್ತು ಶೇ.4 ಸಬ್ಸಿಡಿ ಮೊತ್ತವಾಗಿರುತ್ತದೆ. ಎರಡನ್ನೂ ಫಲಾನುಭವಿಗಳಿಂದ ಪಡೆದು ಅವರು ನಿರಂತರವಾಗಿ ಮರುಪಾವತಿಸಿದಲ್ಲಿ ಮಾತ್ರ ಅವರ ಸಬ್ಸಿಡಿ ವಾಪಸ್ ಬರುತ್ತದೆ. ಆದ್ದರಿಂದ ಫಲಾನುಭವಿಗಳು ಎರಡು ಮತ್ತು ಮೂರನೇ ಕಂತಿನ ಸಾಲ ಪಡೆಯಲು ಆಸಕ್ತಿ ತೋರುತ್ತಿಲ್ಲ. ಪಿಎಂ ಸ್ವನಿಧಿ ಯೋಜನೆಯಲ್ಲಿ ಜಿಲ್ಲೆ 9ನೇ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.ಇದಕ್ಕೆ ಸಂಸದರು ಪ್ರತಿಕ್ರಿಯಿಸಿ, ಬ್ಯಾಂಕುಗಳು ಫಲಾನುಭವಿಗಳ ಸಬ್ಸಿಡಿ ದೊರೆಯುವಂತೆ ಕ್ರಮವಹಿಸಬೇಕು, ಹಾಗೂ ಪಿಎಂ ಸ್ವನಿಧಿ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಿ ಸೌಲಭ್ಯ ನೀಡಬೇಕು ಎಂದರು.
ಮುದ್ರಾ ಯೋಜನೆಯಡಿ ಶಿಶು, ಕಿಶೋರ್ ಮತ್ತು ತರುಣ್ ಘಟಕದಡಿ ಒಟ್ಟು 107038 ಖಾತೆಗಳಿದ್ದು, 113379 ಲಕ್ಷ ರು. ಸಾಲ ಸೌಲಭ್ಯ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರಗತಿಯೇ ಕಡಿಮೆ ಇದ್ದು, ನಿಯಮಗಳನ್ನು ಕೊಂಚ ಸಡಿಲಗೊಳಿಸಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಿ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು. ಹಾಗೆಯೇ ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಎಪಿವೈ ಯೋಜನೆಯಡಿ ಸಹ ಉತ್ತಮ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.ಪಿಎಂ ವಿಶ್ವಕರ್ಮ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು, ಕುಶಲಕರ್ಮಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಬ್ಯಾಂಕುಗಳು ಸಹಕರಿಸಬೇಕು. ಈ ಯೋಜನೆಯಡಿ ಬರುವ ಕುಶಲಕರ್ಮಿಗಳಿಗೆ ತರಬೇತಿ, ಭತ್ಯೆ ಹಾಗೂ ಸಾಲ ಸೌಲಭ್ಯ ನೀಡಲಾಗುವುದು. ಗ್ರಾಮೀಣ ಮತ್ತು ನಗರ ಸೇರಿದಂತೆ ಮೊದಲ ಹಂತದಲ್ಲಿ 69,370 ಅರ್ಜಿಗಳು ಬಂದಿದ್ದು, 52,782 ಅರ್ಜಿಗಳನ್ನು ಶಿಫಾರಸು ಮಾಡಲಾಗಿದೆ. ಎರಡನೇ ಹಂತದಲ್ಲಿ 24,094 ಮತ್ತು ಮೂರನೇ ಹಂತದಲ್ಲಿ 3582 ಅರ್ಜಿಗಳು ಬಂದಿವೆ. ಎರಡನೇ ಮತ್ತು ಮೂರನೇ ಹಂತದಲ್ಲೂ ಅರ್ಜಿಗಳ ಸಂಖ್ಯೆ ಹೆಚ್ಚುವಂತೆ ಕ್ರಮ ವಹಿಸಬೇಕೆಂದರು.
2023-24 ನೇ ಸಾಲಿನಲ್ಲಿ ಬ್ಯಾಂಕುಗಳು ಕೃಷಿ ವಲಯಕ್ಕೆ ಶೇ.73.87 ಸಾಲ ವಿತರಣೆ ಮಾಡಿದ್ದು ಇನ್ನು ಹೆಚ್ಚಿನ ಪ್ರಗತಿ ಆಗಬೇಕು ಎಂದರು.ಕೆನರಾ ಬ್ಯಾಂಕ್ ಡಿಜಿಎಂ ದೇವರಾಜ್ ಆರ್. ಮಾತನಾಡಿ, 2023-24 ನೇ ಸಾಲಿನಲ್ಲಿ ಎಂಎಸ್ ಎಂಇ ವಲಯದಲ್ಲಿ ಶೇ.137.30 ಪ್ರಗತಿ ಸಾಧಿಸುವ ಮೂಲಕ ಉತ್ತಮ ಸಾಧನೆ ಆಗಿದೆ. ಆದರೆ ಕೃಷಿ ವಲಯಕ್ಕೆ ಸಾಲ ನೀಡುವಲ್ಲಿ ಶೇ.73.87 ಪ್ರಗತಿ ಹಾಗೂ ಆದ್ಯತಾ ಶಿಕ್ಷಣ ಮತ್ತು ವಸತಿ ಯಲ್ಲಿ ಕ್ರಮವಾಗಿ ಶೇ.14.54 ಮತ್ತು ಶೇ.19.09 ಪ್ರಗತಿ ಸಾಧಿಸಲಾಗಿದೆ ಎಂದರು.
ಜಿ.ಪಂ. ಸಿಇಓ ಹೇಮಂತ್ ಎನ್. ಮಾತನಾಡಿ, ಮುಂದಿನ ತ್ರೈಮಾಸಿಕ ಸಭೆಯಲ್ಲಿ ಬ್ಯಾಂಕುಗಳು ಶೇ.100 ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು. ಸಭೆಗೆ ಕೂಲಂಕುಷವಾದ ವರದಿಯನ್ನು ಸಿದ್ದಪಡಿಸಿ ತರಬೇಕು. ನಿಗದಿತ ಪ್ರಗತಿ ಸಾಧಿಸದೇ ಇದ್ದಲ್ಲಿ ಅದಕ್ಕೆ ಕಾರಣಗಳನ್ನು ನೀಡಬೇಕೆಂದು ತಿಳಿಸಿದರು.ಸಭೆಯಲ್ಲಿ ಆರ್‌ಬಿಐ ಪ್ರತಿನಿಧಿ, ನಬಾರ್ಡ್ ಡಿಡಿಎಂ ಶರತ್‌ಗೌಡ, ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ, ಬ್ಯಾಂಕುಗಳ ವಿಭಾಗೀಯ ಮ್ಯಾನೇಜರ್‌ಗಳು, ಅಧಿಕಾರಿಗಳು ಹಾಜರಿದ್ದರು.