ಸಾರಾಂಶ
ಯಲ್ಲಾಪುರ: ಯಾವುದೇ ಬ್ಯಾಂಕು ಗ್ರಾಹಕರ ಹಿತರಕ್ಷಣೆಯ ದೃಷ್ಟಿಯಿಂದ ಉತ್ತಮ ಸೇವೆ ನೀಡಿದರೆ, ಆ ಬ್ಯಾಂಕು ಹೆಚ್ಚು ಜನಪ್ರಿಯವಾಗುತ್ತದೆ. ಎಲ್ಲ ವ್ಯವಹಾರಸ್ಥರು ತ್ವರಿತ ಸೇವೆಯನ್ನು ಬಯಸುತ್ತಾರೆ. ಈ ದೃಷ್ಟಿಯಿಂದ ಕರ್ನಾಟಕ ಬ್ಯಾಂಕ್ ಸರ್ಕಾರದ ಸೇವೆಗಳೂ ಸೇರಿದಂತೆ, ಮೊಬೈಲ್, ಇಂಟರ್‌ನೆಟ್ ಸೇವೆಗಳನ್ನು ತ್ವರಿತವಾಗಿ ಒದಗಿಸುತ್ತಿದೆ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಿವರಾಮ್ ಹೆಬ್ಬಾರ್ ತಿಳಿಸಿದರು.
ಜೂ. ೨೪ರಂದು ಪಟ್ಟಣದ ಕರ್ನಾಟಕ ಬ್ಯಾಂಕಿನ ಕಾರ್ಯಾಲಯದಲ್ಲಿ ಬ್ಯಾಂಕಿನ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಬ್ಯಾಂಕಿಗೆ ಠೇವಣಿದಾರರ ಸಮಸ್ಯೆ ಇಲ್ಲ. ಆದರೆ ಉತ್ತಮ ಸಾಲಗಾರರ ಕೊರತೆ ಇದೆ. ದೇಶಾದ್ಯಂತ ವಿಸ್ತಾರಗೊಂಡಿರುವ ಕರ್ನಾಟಕ ಬ್ಯಾಂಕಿಗೆ ಯಾವ ಪುಣ್ಯಾತ್ಮ ಹೆಸರಿಟ್ಟಿದ್ದಾನೋ ಗೊತ್ತಿಲ್ಲ. ಕರ್ನಾಟಕ ರಾಜ್ಯ ನಾಮಕರಣಗೊಳ್ಳುವ ಮುನ್ನವೇ ಕರ್ನಾಟಕ ಬ್ಯಾಂಕೆಂದು ಹೆಸರಿಡಲಾಗಿದೆ. ಇಂತಹ ಬ್ಯಾಂಕು ಯಲ್ಲಾಪುರದಲ್ಲಿ ಸ್ಥಾಪನೆಗೊಳ್ಳಲು ಮಹತ್ವದ ಪಾತ್ರ ವಹಿಸಿದ ಜಯರಾಮ್ ಭಟ್ ಮತ್ತು ಎನ್.ಎಸ್. ಹೆಗಡೆ ಕುಂದರಗಿ ಅವರನ್ನು ಸದಾ ನೆನೆಯಲೇಬೇಕು. ನಮ್ಮ ಕೆಡಿಸಿಸಿ ಬ್ಯಾಂಕಿಗೆ ಜಿಲ್ಲಾ ವ್ಯಾಪ್ತಿ ಮೀರುವಂತಿಲ್ಲ. ಆದರೆ ಈ ಬ್ಯಾಂಕು ದೇಶ ವ್ಯಾಪ್ತಿಯನ್ನೂ ಮೀರಿ ವ್ಯವಹಾರ ಮಾಡುತ್ತಿದ್ದು, ಉತ್ತಮ ಹೆಸರು ಗಳಿಸಿದೆ ಎಂದರು.
ತೆರಿಗೆ ಸಲಹೆಗಾರ, ನ್ಯಾಯವಾದಿ ಎಸ್.ಎಂ. ಭಟ್ ಮಾತನಾಡಿ, ಪ್ರಾರಂಭದಿಂದಲೇ ನಾನು ಕರ್ನಾಟಕ ಬ್ಯಾಂಕಿನ ಗ್ರಾಹಕನಾಗಿದ್ದೇನೆ. ಬ್ಯಾಂಕಿನ ಸೇವೆಯನ್ನು ಗಮನಿಸಿ ಬ್ಯಾಂಕಿನ ಗ್ರಾಹಕರಾಗುವಂತೆ ಸಲಹೆ ನೀಡಿದ್ದೇನೆ. ಇಲ್ಲಿನ ಸಿಬ್ಬಂದಿ ಕಾರ್ಯದಕ್ಷತೆ ಎಲ್ಲರ ಗಮನ ಸೆಳೆದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಶ್ರೀಷ ಭಟ್ಟ ಮಾತನಾಡಿ, ಶತಮಾನ ಕಳೆದ ನಮ್ಮ ಬ್ಯಾಂಕು ದೇಶಾದ್ಯಂತ ೯೬೦ ಶಾಖೆಗಳನ್ನು ಹೊಂದಿದೆ. ₹೧.೭೫ ಸಾವಿರ ಕೋಟಿ ವ್ಯವಹಾರ ಮಾಡಿದ್ದು. ₹೧೯೦೦ ಕೋಟಿ ಲಾಭ ಗಳಿಸಿದೆ ಎಂದರು.
ಗ್ರಾಹಕರ ಪರವಾಗಿ ನ್ಯಾಯವಾದಿ ಪ್ರಕಾಶ್ ಭಟ್ ಮತ್ತು ಅನಿತಾ ಹೆಗಡೆ ಮಾತನಾಡಿದರು. ಉಡುಪಿಯ ಮುಖ್ಯ ಪ್ರಬಂಧಕ ವಿಶ್ವಾಸ್ ಭಟ್ಟ ಮಾತನಾಡಿದರು. ಅನಿತಾ ಹೆಗಡೆ ಪ್ರಾರ್ಥಿಸಿದರು. ಶಾಖಾಧಿಕಾರಿ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಪ್ರದೀಪ್ ಶೆಟ್ಟಿ ನಿರ್ವಹಿಸಿದರು. ವರದಿ ವಾಚಿಸಿದ ಹರ್ಷವರ್ಧನ್ ವಂದಿಸಿದರು.