ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಬನ್ನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 16 ಕೆರೆಗಳಿಗೆ ನೀರು ತುಂಬಿಸಲು ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದ ಪರಿಶಿಷ್ಟ ಜಾತಿ ಕಾಲೋನಿ ಸಿ.ಸಿ.ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬನ್ನಹಳ್ಳಿ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಮಸ್ಯೆ ಹಾಗೂ ಅನುದಾನದ ಕೊರತೆ ಹಾಗೂ ರೈತರ ಜಮೀನುಗಳಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೆಲ ರೈತರಿಂದ ವಿರೋಧ ವ್ಯಕ್ತವಾಗಿತ್ತು. ಈಗಾಗಲೇ ನಾಲ್ಕೈದು ಬಾರಿ ರೈತರೊಂದಿಗೆ ಮಾತುಕತೆ ನಡೆಸಿ ಅವರಿಗೆ ಪರಿಹಾರ ನೀಡಲು ಮನವೊಲಿಸಲಾಗಿದೆ ಎಂದರು.ಈಗಾಗಲೇ ವಿದ್ಯುತ್ ಸ್ಥಾವರದ ಕೆಲಸ ಕೂಡ ಪ್ರಾರಂಭವಾಗಿದೆ. ಉಳಿಕೆ ಕಾಮಗಾರಿಗೆ ಹೆಚ್ಚುವರಿಯಾಗಿ 5 ಕೋಟಿ ರು. ಗೆ ಅನುಮೋದನೆ ಸಿಕ್ಕಿದೆ. ಶೀಘ್ರ ಏತ ನೀರಾವರಿ ಯೋಜನೆ ಮೂಲಕ ಮುಂಬರುವ ಬೇಸಿಗೆ ವೇಳೆಗೆ ಸೋಮನಹಳ್ಳಿ ಜಿಪಂ ವ್ಯಾಪ್ತಿಯ 16 ಕೆರೆಗಳಲ್ಲಿ ನೀರು ಸಂಗ್ರಹವಾಗುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಬಳಕೆಯಾಗಲಿದೆ ಎಂದರು.
ರಸಗೊಬ್ಬರವನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ತಾಲೂಕಿನಾದ್ಯಂತ ವಿತರಿಸಲಾಗುತ್ತಿದೆ. ನಮ್ಮ ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಾಗಿಲ್ಲ. ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ಪೂರೈಕೆಗೆ ಅಗತ್ಯ ಕ್ರಮ ಕೈಕೊಳ್ಳಲಾಗಿದೆ ಎಂದರು.ರಾಜ್ಯಕ್ಕೆ ಅಗತ್ಯವಾಗಿ ಬೇಕಾದ ಯೂರಿಯಾವನ್ನು ನೀಡಲು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರಿಂದ ರಾಜ್ಯದ ಹಲವೆಡೆ ರಸಗೊಬ್ಬರ ವಿತರಣೆಯಲ್ಲಿ ತೊಂದರೆಯಾಗಿತ್ತು. ಆದರೆ, ರಾಜ್ಯ ಸರ್ಕಾರ ಹಂತ ಹಂತವಾಗಿ ರಸಗೊಬ್ಬರ ಪೂರೈಕೆ ಮಾಡುವ ಮೂಲಕ ಗೊಂದಲ ನಿವಾರಣೆಗೆ ಮುಂದಾಗಿದೆ ಎಂದರು.
ಮದ್ದೂರು ಕ್ಷೇತ್ರ ವ್ಯಾಪ್ತಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹುಲಿಕೆರೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ. ಅದನ್ನರಿತು ಈ ಗ್ರಾಮದಲ್ಲಿ ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕೆಲಸಗಳು ಆಗಲು ಗಮನ ನೀಡಲಾಗುತ್ತಿದೆ ಎಂದರು.ಇದೇ ವೇಳೆ ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಗ್ರಾಪಂ ಅಧ್ಯಕ್ಷ ಕೆಂಪರಾಜು, ಸದಸ್ಯರಾದ ಮಾದೇಶ್, ಸುಂದ್ರಮ್ಮ, ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ಮಹದೇವಪ್ಪ, ಮಹೇಶ್, ಪುಟ್ಟಸ್ವಾಮಿ, ಹೊನ್ನಲಗೆರೆ ಸ್ವಾಮಿ, ಸಿದ್ದರಾಜು, ಬೋರಯ್ಯ, ಶ್ರೀನಿವಾಸ್ ಗೌಡ, ಚಿದಂಬರಂ ಮೂರ್ತಿ, ರಾಜೇಂದ್ರ ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ್, ಎಇ ಹನುಮಂತು ಸೇರಿದಂತೆ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))