ತಂದೆ ಅಂತ್ಯಸಂಸ್ಕಾರಕ್ಕೆ ಪರೋಲ್ ಮೇಲೆ ಬಂದ ಬನ್ನಂಜೆ ರಾಜಾ

| Published : May 05 2025, 12:47 AM IST

ತಂದೆ ಅಂತ್ಯಸಂಸ್ಕಾರಕ್ಕೆ ಪರೋಲ್ ಮೇಲೆ ಬಂದ ಬನ್ನಂಜೆ ರಾಜಾ
Share this Article
  • FB
  • TW
  • Linkdin
  • Email

ಸಾರಾಂಶ

ಏ.27ರಂದು ನಿಧನರಾದ ತನ್ನ ತಂದೆ, ನಿವೃತ್ತ ತಹಸೀಲ್ದಾರ್ ಎಂ.ಸುಂದರ್ (88) ಅವರ ಅಂತಿಮ ಸಂಸ್ಕಾರ, ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾ. ನಾಗಪ್ರಸನ್ನ ಅವರು ಷರತ್ತುಗಳ ಮೇಲೆ ಮೇ 3ರಿಂದ ಮೇ 14ರ ವರೆಗೆ ಪರೋಲ್ ನೀಡಿದ್ದಾರೆ.

ಜೀವಾವಾಧಿ ಶಿಕ್ಷೆಯ ಕೈದಿಗೆ ಮೇ 3ರಿಂದ ಮೇ 14ರ ವರೆಗೆ ಹೈಕೋರ್ಟ್‌ ಪರೋಲ್‌

ಕನ್ನಡಪ್ರಭ ವಾರ್ತೆ ಉಡುಪಿ

ಜೀವಾವಧಿ ಶಿಕ್ಷೆಯಲ್ಲಿರುವ ಪಾತಕಿ ಬನ್ನಂಜೆ ರಾಜಾನ ತಂದೆ ನಿಧನರಾದ ಹಿನ್ನೆಲೆಯಲ್ಲಿ ಭಾನುವಾರ ಹುಟ್ಟೂರು ಮಲ್ಪೆಗೆ ಆಗಮಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ.ಏ.27ರಂದು ನಿಧನರಾದ ತನ್ನ ತಂದೆ, ನಿವೃತ್ತ ತಹಸೀಲ್ದಾರ್ ಎಂ.ಸುಂದರ್ (88) ಅವರ ಅಂತಿಮ ಸಂಸ್ಕಾರ, ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾ. ನಾಗಪ್ರಸನ್ನ ಅವರು ಷರತ್ತುಗಳ ಮೇಲೆ ಮೇ 3ರಿಂದ ಮೇ 14ರ ವರೆಗೆ ಪರೋಲ್ ನೀಡಿದ್ದಾರೆ.

ಅದರಂತೆ ಪೊಲೀಸರು ಆತನನ್ನು ಭಾನುವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಪೆ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆತ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ. ಬಳಿಕ ಮಲ್ಪೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲೂ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಎರಡು ದಶಕ ಭೂಗತನಾಗಿದ್ದ ಬನ್ನಂಜೆ ರಾಜನನ್ನು 2015ರ ಫೆಬ್ರವರಿಯಲ್ಲಿ ರಾಜ್ಯದ ಪೊಲೀಸರು ಮೊರಕ್ಕೊದಲ್ಲಿ ಬಂಧಿಸಿ, ಭಾರತಕ್ಕೆ ಕರೆತಂದಿದ್ದರು. ಕೊಲೆ, ಜೀವ ಬೆದರಿಕೆ, ಹಪ್ತಾ ಇತ್ಯಾದಿ 23ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬನ್ನಂಜೆ ರಾಜ, ಅಂಕೋಲದ ಉದ್ಯಮಿ ಆರ್.ಎನ್‌‌. ನಾಯಕ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತಿದ್ದಾನೆ. ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದ್ದು, ಕಳೆದ 10 ವರ್ಷಗಳಿಂದ ರಾಜಾ ಹಿಂಡಲಗಿ ಜೈಲಿನಲ್ಲಿದ್ದಾನೆ.ಬಿಗಿ ಪೊಲೀಸ್ ಭದ್ರತೆಯಲ್ಲಿ ಊರಿಗೆ ಬಂದಿದ್ದು, ಹಗಲು ರಾತ್ರಿ ಆತನ ಮನೆಗೆ ಪೊಲೀಸ್ ಕಾವಲು ಹಾಕಲಾಗಿದೆ. ಆತನಿಗಾಗಿ ಪೊಲೀಸ್ ಇಲಾಖೆ ಮಾಡುವ ಖರ್ಚುಗಳನ್ನೂ ಆತನೇ ಭರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ............

ಮನೆ ಬಿಟ್ಟ ಹೊರಗೆ ಹೋಗುವಂತಿಲ್ಲ

ಬನ್ನಂಜೆ ರಾಜಾ, ಪರೋಲ್‌ ಅವಧಿಯಲ್ಲಿ ಸಹಚರರರೊಂದಿಗೆ ಸೇರಿ ಯಾವುದೇ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಮೊಬೈಲ್, ಇಂಟರ್‌ನೆಟ್ ಬಳಸುವಂತಿಲ್ಲ. ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ತಂದೆಯ ಅಂತ್ಯಸಂಸ್ಕಾರದಲ್ಲಿ ಮಾತ್ರ ಭಾಗಿಯಾಗಬೇಕು ಇತ್ಯಾದಿ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಮೇ 14ರಂದು ಆತನನ್ನು ಮತ್ತೆ ಬೆಳಗಾವಿ ಜೈಲಿಗೆ ಕರೆದೊಯ್ಯಲಾಗುವುದು ಎಂದು ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.