ಬನ್ನಂಜೆ ಗೋವಿಂದಾಚಾರ್ಯರು ಸಮಾಜದ ಉನ್ನತಿಗಾಗಿ ಶ್ರಮಿಸಿದ್ದರು. ವೈಚಾರಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜವನ್ನು ಎಚ್ಚರಿಸಿದ್ದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬನ್ನಂಜೆ ಗೋವಿಂದಾಚಾರ್ಯರು ಸಮಾಜದ ಉನ್ನತಿಗಾಗಿ ಶ್ರಮಿಸಿದ್ದರು. ವೈಚಾರಿಕ ಪ್ರಜ್ಞೆ ಮೂಡಿಸುವ ಮೂಲಕ ಸಮಾಜವನ್ನು ಎಚ್ಚರಿಸಿದ್ದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಗಾಯನ ಸಮಾಜದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಬನ್ನಂಜೆ 90ರ ವಿಶ್ವನಮನ ಯಾತ್ರೆಯ ಸಮಾರೋಪ ಸಮಾರಂಭ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ, ವಿಶೇಷವಾಗಿ ದೇಶದ ಪ್ರಮುಖ ವಿದ್ವಾಂಸರಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಒಬ್ಬರಾಗಿದ್ದರು. ಸಾಹಿತ್ಯ, ಸಮಾಜದ ಉನ್ನತಿಗಾಗಿ ಅರ್ಪಿಸಿಕೊಂಡಿದ್ದ ಮಹಾನ್‌ ವ್ಯಕ್ತಿತ್ವ ಅವರದು. ಉಡುಪಿ ಅಷ್ಟಮಠಗಳ ಮಾರ್ಗದರ್ಶಕರಾಗಿದ್ದರು. ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದು ಸಮಾಜವನ್ನು ಎಚ್ಚರಿಸಲು ಕವಿತ್ವವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರು ಎಂದರು.

25 ಸಾವಿರ ಗಂಟೆ ಪ್ರವಚನ:

ಬನ್ನಂಜೆ ಗೋವಿಂದಾಚಾರ್ಯರ ಬರಹವು ಶಾಸ್ತ್ರ ಪ್ರಜ್ಞೆ ಮತ್ತು ಪ್ರತಿಭೆಗಳ ಸಂಗಮವಾಗಿತ್ತು. ಹಲವು ಭಾಷೆಗಳಲ್ಲಿ ಪ್ರಖರ ಪಾಂಡಿತ್ಯ ಹೊಂದಿದ್ದರು. ‘ತುಳು ನನ್ನ ಮಾತೃ ಭಾಷೆ, ಕನ್ನಡ ನನ್ನ ತಂದೆ ಭಾಷೆ ಹಾಗೂ ಸಂಸ್ಕೃತ ನನ್ನ ಭಾಷೆ’ ಎಂದು ಆಚಾರ್ಯರೇ ಹೇಳಿದ್ದಾರೆ. ಚಲನಚಿತ್ರ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಾಗಿದೆ. 25 ಸಾವಿರ ಗಂಟೆಗಳ ಸುದೀರ್ಘ ಪ್ರವಚನ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಸಾಹಿತಿ, ನಾಟಕಕಾರ, ಅನುವಾದಕ, ಪತ್ರಕರ್ತ, ಪ್ರವಚನ ಸೇರಿದಂತೆ ಹಲವು ರಂಗಗಳಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಸೇವೆ ಸಲ್ಲಿಸಿದ್ದಾರೆ. ಅವರು ಸತ್ಯಾನ್ವೇಷಣೆಗಾಗಿ ದುಡಿಯುತ್ತಿದ್ದರು. ಪುತ್ತಿಗೆ ಶ್ರೀಗಳ ವಿದೇಶ ಪ್ರವಾಸಕ್ಕೆಬೆಂಬಲ ನೀಡಿದವರಲ್ಲಿ ಆಚಾರ್ಯರು ಒಬ್ಬರಾಗಿದ್ದರು. ಆನೆ ನಡೆದದ್ದೇ ದಾರಿ ಎಂಬಂತೆ ಅವರು ವಿದ್ವತ್‌ ದಾರಿಯಲ್ಲಿ ನಡೆದರು ಎಂದು ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ನಟಿ ವಿನಯಾ ಪ್ರಸಾದ್‌ ಸೇರಿದಂತೆ ಹಲವು ಸಾಧಕರನ್ನು ಗೌರವಿಸಲಾಯಿತು. ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಸೋಸಲೆಯ ವ್ಯಾಸರಾಜ ಮಠದ ವಿದ್ಯಾಶ್ರೀಶ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್‌, ಸಂಗೀತ ವಿದ್ವಾನ್‌ ವಿದ್ಯಾಭೂಷಣ, ಶುಂಠಿ ಸತ್ಯನಾರಾಯಣ ಭಟ್‌ ಸಾಗರ, ಬನ್ನಂಜೆಯವರ ಒಡನಾಡಿ ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ, ಪ್ರೊ.ಪಿ.ಆರ್‌.ಮುಕುಂದ, ಪ್ರವಚನಕಾರ ವಿದ್ವಾನ್‌ ಬ್ರಹ್ಮಣ್ಯಾಚಾರ್‌, ಪ್ರತಿಷ್ಠಾನದ ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಉಪಸ್ಥಿತರಿದ್ದರು.

ಔಚಿತ್ಯಪೂರ್ಣ ಕಾರ್ಯಕ್ರಮ

ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದ್ದು ಕೃಷ್ಣಾರ್ಪಣ ಮಸ್ತು ಎಂದಿದ್ದೇವೆ. ಅಶ್ವಮೇಧ ಯಾಗ ನಡೆಸಿದಂತೆ ಎಲ್ಲೆಡೆ ಕಾರ್ಯಕ್ರಮ ಆಯೋಜಿಸಿ ಇದೀಗ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂಧ್ರ ತೀರ್ಥ ಸ್ವಾಮೀಜಿ ಬಣ್ಣಿಸಿದರು. ಬನ್ನಂಜೆ ಗೋವಿಂದಾಚಾರ್ಯರು ವಸ್ತು ನಿಷ್ಠರಾಗಿದ್ದು ಅಪರೂಪದ ಚಿಂತನೆ ಹೊಂದಿದ್ದರು. ಇಲ್ಲಿ ಅನೇಕ ಸಾಧಕರನ್ನು ಗೌರವಿಸಲಾಗಿದೆ. ಸನ್ಮಾನ ಸ್ವೀಕರಿಸಲು ಒಪ್ಪಿ ಸಾಧಕರು ಆಗಮಿಸಿದ್ದಾರೆ ಎಂದರೆ ಅದಕ್ಕೆ ಆಚಾರ್ಯರ ವ್ಯಕ್ತಿತ್ವ ಕಾರಣವಾಗಿದೆ ಎಂದು ತಿಳಿಸಿದರು.

ಗಾಯನ ಸಮಾಜದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಬನ್ನಂಜೆ 90 ರ ವಿಶ್ವನಮನ ಯಾತ್ರೆಯ ಸಮಾರೋಪ ಸಮಾರಂಭ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಭೇದೋಜ್ಜೀವನಂ’ ಕೃತಿಯನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುಗುಣೇಂದ್ರ ತೀರ್ಥ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಮತ್ತಿತರರು ಲೋಕಾರ್ಪಣೆಗೊಳಿಸಿದರು.