ಸಾರಾಂಶ
ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದಂತೆ, ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವೆಡೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ಭರ್ಜರಿ ಮಾರಾಟವಾಗುತ್ತಿದೆ.
ರಾಜು ಕಾಂಬಳೆ
ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದಂತೆ, ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವೆಡೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ಭರ್ಜರಿ ಮಾರಾಟವಾಗುತ್ತಿದೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ಅಬ್ಬರ ಜೋರಾಗಿದ್ದು, ಅಂಗೈ ಅಳತೆಯಿಂದ ಆಳಡಿ ಎತ್ತರದ ಸಾರ್ವಜನಿಕ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿವೆ.
ಈಗಾಗಲೇ ಗಣೇಶ ವಿಗ್ರಹದ ಮಾರಾಟಕ್ಕೆ ಪ್ರಸಿದ್ಧವಾಗಿರುವ ವಿ.ವಿ.ಪುರ, ಮೈಸೂರು ರಸ್ತೆಯ ಕುಂಬಳಗೂಡು, ರಾಜಾಜಿನಗರ, ಮಲ್ಲೇಶ್ವರ, ಶೇಷಾದ್ರಿಪುರ, ಜಯನಗರ, ಯಶವಂತಪುರ, ಚಾಮರಾಜಪೇಟೆ, ಸರ್ಜಾಪುರ, ಮಾರಸಂದ್ರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಜತೆಗೆ ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳೂ ಯಾವುದೇ ಅಡೆತಡೆಗಳಿಲ್ಲದೇ ರಾರಾಜಿಸುತ್ತಿವೆ.
ಮಣ್ಣಿನ ಮೂರ್ತಿ ಪ್ರದರ್ಶಿಸಿ ಪಿಒಪಿ ಮಾರಾಟ:
ಗಣೇಶ ಮೂರ್ತಿ ಮಾರಾಟದ ಸ್ಥಳದಲ್ಲಿ ಬಹುತೇಕ ಕಡೆ ವ್ಯಾಪಾರಿಗಳು ಮಣ್ಣಿನ ಮೂರ್ತಿಯನ್ನು ಮಾತ್ರ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಅಪ್ಪಿತಪ್ಪಿಯೂ ಪಿಓಪಿ ಮೂರ್ತಿಗಳನ್ನು ಪ್ರದರ್ಶನ ಮಾಡುವುದಿಲ್ಲ. ಪಿಓಪಿ ಗಣೇಶ ಮೂರ್ತಿಗಳ ಗೋದಾಮಿನಿಂದ ನೇರವಾಗಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳು ಪಿಒಪಿ ಮೂರ್ತಿಗಳ ಸಂಗ್ರಹಿಸಿರುವ ಸ್ಥಳ ಪತ್ತೆ ಮಾಡುವುದೇ ಸವಾಲಿನ ಸಂಗತಿಯಾಗಿದೆ.
ಕಡಿಮೆ ದರ ಕಾರಣ ಪಿಒಪಿಗೆ ಬೇಡಿಕೆ:
ಮೂರ್ತಿಗಳ ರಚನೆಗೆ ಬೇಕಾದ ಮಣ್ಣು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಅಲ್ಲದೇ ಮಣ್ಣಿನ ಮೂರ್ತಿಗಳ ಬೆಲೆ ಪಿಓಪಿ ಮೂರ್ತಿಗಳಿಗೆ ಹೊಲಿಸಿದರೆ ದರ ಹೆಚ್ಚೇ ಆಗಿರುತ್ತದೆ. ಹೀಗಾಗಿ ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿ ಎಂದೂ ಗೊತ್ತಿದ್ದರೂ ಸಹ ಜನರು ಕಡಿಮೆ ಬೆಲೆಗೆ ಸಿಗುವ ಪಿಓಪಿ ಮೂರ್ತಿಗಳನ್ನು ಕೇಳುತ್ತಾರೆ. ಇದೂ ಕೂಡಾ ಪಿಒಪಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಪ್ರಯೋಜನವಾಗದ ಜಾಗೃತಿ
ಪಿಒಪಿ ಗಣೇಶ ಮೂರ್ತಿಗಳ ಬಳಕೆಯಿಂದ ಪರಿಸರ ಹಾಗೂ ಜಲಚರಗಳ ಜೀವಕ್ಕೆ ಕುತ್ತು ಉಂಟಾಗುವುದರಿಂದ ಅವುಗಳ ಬಳಕೆಗೆ ಬೇಡ ಎಂದು ಹಲವು ವರ್ಷಳಿಂದ ಜಾಗೃತಿ ಮೂಡಿಸುತ್ತಿದ್ದರೂ ಅವುಗಳ ತಯಾರಿಕೆ ಮತ್ತು ಬಳಕೆ ಮಾತ್ರ ನಿಂತಿಲ್ಲ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಪಿಒಪಿ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಅಧಿಕಾರಿಗಳಿಗೆ ಇಚ್ಚಾಸಕ್ತಿ ಕೊರತೆ:
ಪಿಓಪಿ ಗಣೇಶ ಮೂರ್ತಿಗಳನ್ನು ತಡೆಗಟ್ಟುವುದು ಮತ್ತು ನಿಯಂತ್ರಣದ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಬಿಬಿಎಂಪಿ ಅಧಿಕಾರಿಗಳ ಇಚ್ಚಾಸಕ್ತಿ ಕೊರತೆ ಎದ್ದು ಕಾಣಿಸುತ್ತಿದೆ. ನಾಮಕೇವಾಸ್ತೆಗೆ ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ವಹಿಸದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಪಿಓಪಿ ಮೂರ್ತಿ ತಯಾರಕರು ರಾಜಾರೋಷವಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ದೂರುಗಳು ಪರಿಸರವಾದಿಗಳಿಂದ ಕೇಳಿ ಬರುತ್ತಿವೆ.
ಪಿಒಪಿ ನಿಷೇಧ ಏಕೆ?
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹಗಳಿಗೆ ಉಪಯೋಗಿಸುವ ರಾಸಾಯನಿಕ ಮರ್ಕ್ಯುರಿ, ಆರ್ಸೆನಿಕ, ಸೀಸ, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್, ಸತುಗಳಂತಹ ಭಾರಲೋಹಗಳಿಂದ ಕೂಡಿದೆ. ಈ ಹಾನಿಕಾರಕ ರಾಸಾಯನಿಕ ನೀರಿನಲ್ಲಿ ಸೇರಿ ಜಲಮೂಲ ಕಲುಷಿತಗೊಂಡು ಮೀನು ಹಾಗೂ ವಿವಿಧ ಜಲಚರಗಳು ಸಾವನಪ್ಪುತ್ತವೆ. ಕಲುಷಿತ ನೀರು ಬಳಸುವ ಜನ, ಜಾನುವಾರುಗಳಿಗೆ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಹರಡುತ್ತವೆ. ಹೀಗಾಗಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದಂತೆ 2016ರಲ್ಲಿ ರಾಜ್ಯದಲ್ಲಿ ಇವುಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಲಾಗಿದೆ.ಪಿಒಪಿಗೆ ಪರ್ಯಾಯ ಏನು?
ಪಿಓಪಿ ಗಣೇಶ ಮೂರ್ತಿಗಳಿಗೆ ಪರ್ಯಾಯವಾಗಿ ಹಲವಾರು ರೀತಿಯಲ್ಲಿ ಪರಿಸರ ಗಣಪತಿಗಳನ್ನು ಮಾಡಬಹುದು. ಸಂಪೂರ್ಣವಾಗಿ ಮಣ್ಣಿನಿಂದಲೇ ಸುಮಾರು 5 ಅಡಿಯಿಂದ 6 ಅಡಿಯವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಅಲ್ಲದೇ, ತೆಂಗಿನಕಾಯಿ, ಹಣ್ಣು - ತರಕಾರಿಗಳಿಂದ, ಧಾನ್ಯಗಳಿಂದಲೂ ವಿಶಿಷ್ಟವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಬಹುದು. ಇಂತಹ ಪರಿಸರ ಸ್ನೇಹಿ ಮೂರ್ತಿಗಳನ್ನು ನದಿ, ಕೆರೆ, ಹಳ್ಳಕೊಳ್ಳಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳಿಗೆ ಸಮಸ್ಯೆಯಿಲ್ಲ. ಪರಿಸರಕ್ಕೂ ಯಾವುದೇ ಹಾನಿಯಿಲ್ಲ.