ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಿ, ಬ್ಯಾನರ್ ಗಲಾಟೆ ಕುರಿತು ಮಾಹಿತಿ ಸಂಗ್ರಹಿಸಿದರು.
ಬಳ್ಳಾರಿ: ಇಲ್ಲಿನ ಜನಾರ್ದನ ರೆಡ್ಡಿ ಮನೆಯ ಮುಂಭಾಗ ಗುರುವಾರ ರಾತ್ರಿ ಜರುಗಿದ ಬ್ಯಾನರ್ ಗಲಾಟೆ ಪ್ರಕರಣದ ಸತ್ಯಾಸತ್ಯತೆಯನ್ನು ಅವಲೋಕಿಸಲು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗ ಬಳ್ಳಾರಿಗೆ ಶನಿವಾರ ಭೇಟಿ ನೀಡಿತು.
ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಿ, ಬ್ಯಾನರ್ ಗಲಾಟೆ ಕುರಿತು ಮಾಹಿತಿ ಸಂಗ್ರಹಿಸಿದರು. ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಸಚಿವ ಜಮೀರ್ ಖಾನ್ ಹಾಗೂ ಕಂಪ್ಲಿ ಶಾಸಕ ಗಣೇಶ್ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಿಯೋಗ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡಿತು.ಬೆಳಿಗ್ಗೆ 11 ಗಂಟೆಗೆ ಶುರುವಾದ ಸಭೆ ಸಂಜೆ 4 ಗಂಟೆವರೆಗೆ ಜರುಗಿತು. ಬಳಿಕ ಘಟನಾ ಸ್ಥಳಕ್ಕೆ ತೆರಳಿದ ನಿಯೋಗ, ವೀಕ್ಷಣೆ ಮಾಡಿತು. ಅಲ್ಲಿಂದ ಹುಸೇನ್ ನಗರಕ್ಕೆ ತೆರಳಿದ ನಿಯೋಗದ ಸದಸ್ಯರು ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಿಯೋಗ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಎಂ. ರೇವಣ್ಣ, ಬಳ್ಳಾರಿಯಲ್ಲಿ ಗುರುವಾರ ರಾತ್ರಿ ಜರುಗಿದ ಬ್ಯಾನರ್ ಗಲಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇವೆ. ಚುನಾಯಿತ ಪ್ರತಿನಿಧಿಗಳು, ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕಾರಿಗಳಿಂದ ಘಟನೆ ಕುರಿತು ಮನವರಿಕೆ ಮಾಡಿಕೊಂಡಿದ್ದೇವೆ. ವರದಿಯನ್ನು ಮೂರು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ನಿಯೋಗ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಲು ಬರುವುದಿಲ್ಲ. ಸರ್ಕಾರವೇ ಇದನ್ನು ಬಹಿರಂಗಪಡಿಸುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಮೃತ ಯುವಕನ ಕುಟುಂಬಕ್ಕೆ ಸರ್ಕಾರ ಹಾಗೂ ಪಕ್ಷ ನೆರವು ನೀಡಲಿದೆ ಎಂದು ತಿಳಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ, ಲೋಕಸಭಾ ಸದಸ್ಯ ಕುಮಾರ ನಾಯಕ್, ಚಳ್ಳಕೆರೆ ಶಾಸಕ ರಘುಮೂರ್ತಿ, ಜಕ್ಕಪ್ಪನವರ್ ನಿಯೋಗದಲ್ಲಿದ್ದರು. ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜೆ.ಎಸ್. ಆಂಜಿನೇಯಲು, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ ಸೇರಿದಂತೆ ಪಕ್ಷದ ಮುಖಂಡರು ಇದ್ದರು.