ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು (HPPL) ಯೋಜನೆಗೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೆ ಬಂದಿದೆ.

ಉತ್ತರಾಖಂಡದ ಪವಿತ್ರ ಕೇದಾರನಾಥ ದೇವಸ್ಥಾನಕ್ಕೆ ಮೀನುಗಾರ ಯುವಕರು ಭೇಟಿ

ದೇವಸ್ಥಾನದ ಮುಂಭಾಗ ಬಂದರು ವಿರೋಧಿ ಬ್ಯಾನರ್ ಪ್ರದರ್ಶನಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು (HPPL) ಯೋಜನೆಗೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೆ ಬಂದಿದೆ. ತಮ್ಮ ಬದುಕು ಮತ್ತು ಉದ್ಯೋಗ ಕಸಿದುಕೊಳ್ಳುವ ಈ ಯೋಜನೆಯ ವಿರುದ್ಧ ಮೀನುಗಾರರು ಸುದೀರ್ಘ ಕಾಲದಿಂದ ಬೀದಿಗಿಳಿದು ಹೋರಾಡುತ್ತಿದ್ದಾರೆ. ಇದೀಗ ಮೀನುಗಾರ ಯುವಕರು ನೇರವಾಗಿ ದೇವರ ಮೊರೆ ಹೋಗಿದ್ದಾರೆ.

ಹೊನ್ನಾವರ ಮೂಲದ ಮೀನುಗಾರ ಯುವಕರು ಉತ್ತರಾಖಂಡದ ಪವಿತ್ರ ಕೇದಾರನಾಥ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದು, ಅಲ್ಲಿ ದೇವಸ್ಥಾನದ ಮುಂಭಾಗದಲ್ಲೇ ಹೊನ್ನಾವರ ಬಂದರು ವಿರೋಧಿ ಬ್ಯಾನರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇದಾರನಾಥದಲ್ಲಿ ತಮ್ಮ ಅಳಲನ್ನು ಹೇಳಿಕೊಂಡಿರುವ ಮೀನುಗಾರರು ತಮಗೆ ಎದುರಾಗಿರುವ ಸಂಕಷ್ಟ ಹೋಗಲಾಡಿಸು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

"ಹೊನ್ನಾವರ ಕಾಸರಕೋಡ ಟೊಂಕಾ ವಾಣಿಜ್ಯ ಬಂದರ್ ತೊಲಗಲಿ... ಸ್ಥಳೀಯ ಮೀನುಗಾರರ ಬದುಕು ಉಳಿಯಲಿ... ಕಾಸರಕೋಡ ವಾಣಿಜ್ಯ ಬಂದರು ವಿಚಾರದಲ್ಲಿ ಅನ್ಯಾಯ, ಅಧರ್ಮ ತಾಂಡವವಾಡುತ್ತಿದ್ದರೂ ಬಡ ಮೀನುಗಾರರಾದ ನಾವು ಭಗವಂತನ ನ್ಯಾಯದ ನಿರೀಕ್ಷೆಯಲ್ಲಿದ್ದೇವೆ. ''''''''ನ್ಯಾಯ ದೊರಕಿಸು ತಂದೆ'''''''' " ಎಂದು ಬರೆಯಲಾದ ಬ್ಯಾನರನ್ನು ಕೇದಾರನಾಥನ ಸನ್ನಿಧಿಯಲ್ಲಿ ಪ್ರದರ್ಶಿಸಿದ್ದಾರೆ.

ಕಾಸರಕೋಡ ಟೊಂಕಾ ಪ್ರದೇಶದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (HPPL) ವತಿಯಿಂದ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ಯೋಜನೆಯು ತಮ್ಮ ಸಾಂಪ್ರದಾಯಿಕ ಮೀನುಗಾರಿಕಾ ಹಕ್ಕುಗಳನ್ನು ಮತ್ತು ನೈಸರ್ಗಿಕ ಪರಿಸರವನ್ನು ನಾಶಪಡಿಸುತ್ತದೆ ಎಂದು ಸ್ಥಳೀಯರು ಮೊದಲಿನಿಂದಲೂ ಆಕ್ಷೇಪಿಸುತ್ತಿದ್ದಾರೆ. ಈ ಕರಾವಳಿ ತೀರವೇ ಮೀನುಗಾರರ ಬದುಕಿಗೆ ಆಧಾರ. ಬಂದರು ಕಾಮಗಾರಿಯಿಂದಾಗಿ ನೂರಾರು ಮೀನುಗಾರ ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಪಾಲಾಗುವ ಭೀತಿ ಎದುರಿಸುತ್ತಿವೆ.

ಯೋಜನೆಯನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ಹಾಗೂ ರಾಜಕಾರಣಿಗಳು ವಿಫಲರಾಗಿದ್ದಾರೆ ಮತ್ತು ಮೀನುಗಾರರನ್ನು ಕಡೆಗಣಿಸಿದ್ದಾರೆ ಎನ್ನುವುದು ಸ್ಥಳೀಯರ ಮುಖ್ಯ ಆಕ್ರೋಶವಾಗಿದೆ. ಮನುಷ್ಯರು ಕೈಬಿಟ್ಟರೂ ಆ ಕರುಣಾಮಯಿ ಈಶ್ವರನಾದರೂ ತಮಗೆ ನ್ಯಾಯ ಒದಗಿಸಲಿ ಎಂಬ ನಂಬಿಕೆಯಿಂದ ಯುವಕರು ಕೇದಾರನಾಥದ ದ್ವಾರದಲ್ಲಿ ನ್ಯಾಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇದಾರನಾಥ ದೇವಸ್ಥಾನದ ಮುಂಭಾಗದಲ್ಲಿ ಬ್ಯಾನರ್ ಹಿಡಿದಿರುವ ಚಿತ್ರ ಭಾರೀ ವೈರಲ್ ಆಗಿದ್ದು ಕಾಸರಕೋಡ ಮೀನುಗಾರರ ನಿರಂತರ ಹೋರಾಟ ಮತ್ತೊಮ್ಮೆ ರಾಜ್ಯಮಟ್ಟದ ಗಮನ ಸೆಳೆಯುವಂತೆ ಮಾಡಿದೆ.