ಸಾರಾಂಶ
ಶಾಲಾ ಹಳೆ ವಿದ್ಯಾರ್ಥಿ ಉಮೇಶ್ ಸುಂದರ ಪಾಟ್ಕರ್ ಪೊದಮಲೆ ಇವರು ವರ್ಷಂಪ್ರತಿಯಂತೆ ನೀಡುತ್ತಿರುವ ನೋಟ್ ಪುಸ್ತಕಗಳು, ಬಂಟಕಲ್ಲು ಲಯನ್ಸ್ ಜಾಸ್ಮಿನ್ ಇವರಿಂದ ಸ್ಕೂಲ್ ಬ್ಯಾಗ್ ಮತ್ತು ಹಳೆವಿದ್ಯಾರ್ಥಿ ಸುಕುಮಾರ್ ಪ್ರಭು ಮಾಣಿಪಾಡಿ ಇವರಿಂದ ನೀಡಿದ ಕೊಡೆ ವಿತರಣಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಕಾಪು
೯೯ನೇ ಶೈಕ್ಷಣಿಕ ವರ್ಷಾರಂಭವನ್ನು ಕಾಣುತ್ತಿರುವ ಇಲ್ಲಿನ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಹಳೆ ವಿದ್ಯಾರ್ಥಿ ಉಮೇಶ್ ಸುಂದರ ಪಾಟ್ಕರ್ ಪೊದಮಲೆ ಇವರು ವರ್ಷಂಪ್ರತಿಯಂತೆ ನೀಡುತ್ತಿರುವ ನೋಟ್ ಪುಸ್ತಕಗಳು, ಬಂಟಕಲ್ಲು ಲಯನ್ಸ್ ಜಾಸ್ಮಿನ್ ಇವರಿಂದ ಸ್ಕೂಲ್ ಬ್ಯಾಗ್ ಮತ್ತು ಹಳೆವಿದ್ಯಾರ್ಥಿ ಸುಕುಮಾರ್ ಪ್ರಭು ಮಾಣಿಪಾಡಿ ಇವರಿಂದ ನೀಡಿದ ಕೊಡೆ ವಿತರಣಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರುಗಿತು.ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕ ಗಂಪದಬೈಲು ಜಯರಾಮ ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪ್ರಭು, ದಾನಿಗಳಾದ ಸುಂದರ ಪಾಟ್ಕರ್ ಪೊದಮಲೆ, ಲಯನ್ಸ್ ಅಧ್ಯಕ್ಷೆ ಪ್ರಮೀಳಾ ಲೋಬೊ, ಜಯಲಕ್ಷ್ಮೀ ಸುಕುಮಾರ್ ಪ್ರಭು, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ನವೀನ್, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ ಸಹಾಯ ನೀಡುತ್ತಿರುವ ದಾನಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕಿ ವಿನುತಾ ಸ್ವಾಗತಿಸಿದರು. ಶಾಲಿನಿ ನಿರೂಪಿಸಿದರು. ಸುಮತಿ ವಂದಿಸಿದರು. ಲಯನ್ಸ್ ಜಾಸ್ಮಿನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.