ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಪುರಸಭೆಯ ಒಂದು ಸ್ಥಾನ ಹಾಗೂ 11 ಗ್ರಾಪಂ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಗೆ ತೆರವಾದ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬಿ.ಸಿ. ರೋಡಿನ ಆಡಳಿತಸೌಧದಲ್ಲಿ ನಡೆಯಿತು. ಒಟ್ಟು 12 ಸ್ಥಾನಗಳಲ್ಲಿ 10ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಥಿಗಳು ಜಯಭೇರಿ ಗಳಿಸಿದರೆ 2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.ಬಂಟ್ವಾಳ ಪುರಸಭೆಯ ಮಂಡಾಡಿ ವಾಡ್-2ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಪೂಜಾರಿ ಗೆಲುವು ಸಾಧಿಸುವ ಮೂಲಕ ಈ ಸ್ಥಾನವನ್ನು ‘ಕೈ’ ವಶದಲ್ಲಿಯೇ ಉಳಿಸಿಕೊಂಡಿದ್ದು, ಪುರಸಭೆಯಲ್ಲಿ ಆಡಳಿತವನ್ನು ಭದ್ರಗೊಳಿಸಿದೆ.ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಗಂಗಾಧರ ಪೂಜಾರಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಬಳಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಅವಿಭಜಿತ ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಬಂಟ್ವಾಳ ಪುರಸಭೆಯಲ್ಲಿ ಮಾತ್ರ ಉಪಚುನಾವಣೆ ನಡೆದಿದೆ. ಗ್ರಾ.ಪಂ.ನಲ್ಲೂ ಕಾಂಗ್ರೆಸ್ ಬೆಂಬಲಿತರ ಕಮಾಲ್: ಬಂಟ್ವಾಳ ಕ್ಷೇತ್ರದ ಸ್ಥಳೀಯಾಡಳಿತ ಸಂಸ್ಥೆಗಳಾದ ಸಜೀಪಮುನ್ನೂರು ಗ್ರಾಪಂನಲ್ಲಿ ತೆರವಾದ 3 ಸ್ಥಾನಗಳಲ್ಲಿಯು ಕಾಂಗ್ರೆಸ್ ಬೆಂಬಲಿತರಾದ ಇಸ್ಮಾಯಿಲ್, ಧನಂಜಯ್ ಶೆಟ್ಟಿ, ಸೆಲಿನ್ ಅವರು ವಿಜಯಗಳಿಸಿದ್ದಾರೆ.ಪಂಜಿಕಲ್ಲು ಗ್ರಾ.ಪಂ.ನ 2 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತರಾದ ರಾಜೇಶ್ ಗೌಡ, ಕೇಶವ ಪೂಜಾರಿ ಜಯಭೇರಿ ಸಾಧಿಸಿದ್ದಾರೆ. ಅಮ್ಟಾಡಿ ಗ್ರಾ.ಪಂ.1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಕೇಶವ ಜೋಗಿ, ಸಜೀಪಮೂಡ ಗ್ರಾ.ಪಂ.ನ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕರೀಂ, ಚೆನ್ನೈತ್ತೋಡಿ ಗ್ರಾ.ಪಂ.ನ 1ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಜಯಂತಿ ಸತೀಶ್ ಪೂಜಾರಿ, ಬಡಗಬೆಳ್ಳೂರು ಗ್ರಾ.ಪಂ.ನ 1 ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮೋಹನದಾಸ್ ಕೊಟ್ಟಾರಿ, ಮಂಚಿ ಗ್ರಾ.ಪಂ. ಬಿಜೆಪಿ ಬೆಂಬಲಿತ ರಾಜೇಶ್ ನೂಜಿಪ್ಪಾಡಿ ಹಾಗೂ ಪುತ್ತೂರು ಕ್ಷೇತ್ರದ ಬಿಳಿಯೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ನಳಿನಿ ಅವರು ಗೆಲುವು ಸಾಧಿಸಿದ್ದಾರೆ.
ಬಂಟ್ವಾಳ ಕ್ಷೇತ್ರದದಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಯಾದ ಪುರಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಾದ 10 ಗ್ರಾ.ಪಂ.ಗಳಲ್ಲಿ ಹಾಗೂ ಬಂಟ್ವಾಳ ತಾಲೂಕಿನ ಪುತ್ತೂರು ಕ್ಷೇತ್ರಕ್ಕೊಳಪಟ್ಟ ಬಿಳಿಯೂರು ಗ್ರಾ.ಪಂ. ನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆದಿದಿದೆ. ಇದರಲ್ಲಿ ಮಂಚಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಒಂದು ಸ್ಥಾನವನ್ನು ಉಳಿಸಿಕೊಂಡಿದ್ದರೆ, ಬಡಗಬೆಳ್ಳೂರು ಗ್ರಾ.ಪಂ. ನಲ್ಲಿ ಕಾಂಗ್ರೆಸ್ ಬೆಂಬಲಿತ ತೆಕ್ಕೆಯಲ್ಲಿದ್ದ ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪಾಲಾಗಿದೆ.ವಿಶೇಷವೆಂದರೆ ಸಜೀಪಮುನ್ನೂರು ಗ್ರಾ.ಪಂ.ನಲ್ಲಿ ಮೂರು ಸ್ಥಾನದಲ್ಲೂ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.ಅಮ್ಟಾಡಿ ಗ್ರಾ.ಪಂ.ನಲ್ಲಿ ಎಡಪಕ್ಷದ ತೆಕ್ಕೆಯಲ್ಲಿದ್ದ ಒಂದು ಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದೆ.
ಪಂಜಿಕಲ್ಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರ ವಶದಲ್ಲಿದ್ದು ಎರಡೂ ಸ್ಥಾನಗಳು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಒಲಿದಿದೆ.ತಹಸೀಲ್ದಾರ್ ಡಿ. ಅರ್ಚನಾ ಭಟ್ ಮಾರ್ಗದರ್ಶನದಲ್ಲಿ ಚುನಾವಣಾ ಶಾಖೆಯ ಉಪತಹಸೀಲ್ದಾರ್ ನವೀನ್ ಬೆಂಜನಪದವು, ಮಂಜುನಾಥ್, ಶ್ರೀಕಲಾ ಅವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಆಡಳಿತಸೌಧದ ಮುಂಭಾಗ ಬೆಳಗ್ಗಿನಿಂದ ಮತ ಎಣಿಕೆ ಮುಗಿಯುವ ವರೆಗೂ ಕುತೂಹಲಿಗರು, ಆಯಾಯ ಪಕ್ಷದ ಕಾರ್ಯಕರ್ತರು, ನಾಯಕರು ಸೇರಿದ್ದರು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮತ ಎಣಿಕೆ ಕಾರ್ಯ ಮುಗಿದಿತ್ತು. ಗೆದ್ದ ಅಭ್ಯರ್ಥಿಗಳನ್ನು ಅವರ ಬೆಂಬಲಿಗರು ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ದರು. ಬಂಟ್ವಾಳ ನಗರ ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದರು. ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅಭಿನಂದಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ರಮಾನಾಥ ರೈ ಅಭಿನಂದಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿದೆ. ಇದಕ್ಕಾಗಿ ಸರ್ಕಾರಕ್ಕೆ ಮತದಾರರು ಕೃಪೆ ತೋರಿದ್ದಾರೆ. ಮುಂದೆಯೂ ತೋರುತ್ತಾರೆ ಎನ್ನುವುದಕ್ಕೆ ಈ ದಿನದ ಫಲಿತಾಂಶವೇ ಸಾಕ್ಷಿ ಎಂದು ಮಾಜಿಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.