ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಸಿಗಲಿ

| Published : Nov 27 2024, 01:02 AM IST

ಸಾರಾಂಶ

ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಿ ಕೊಡುವಲ್ಲಿ ಅನೇಕ ಸಮಸ್ಯೆಗಳಾಗುತ್ತಿವೆ. ಆ ಸಮಸ್ಯೆಗಳಿಗೆ ಕಾರಣ ಹಾಗೂ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ಅಧಿಕಾರಿಗಳು ಗಮನಹರಿಸಬೇಕಿದೆ.

ಹುಬ್ಬಳ್ಳಿ:

ವಿಕಲಚೇತನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದೆ, ಎಲ್ಲ ಸೌಲಭ್ಯ ಪಡೆದುಕೊಳ್ಳಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಕೆ. ಹೇಳಿದರು.

ಅವರು ಬೆಂಗಳೂರಿನ ಪೋರ್ಥವೆ ಫೌಂಡೇಶನ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯಿತಿ ಆಶ್ರಯದಲ್ಲಿ ನಗರದ ಸರ್ಕಾರಿ ಅಂಧರ ಪಾಠಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನದ ಪ್ರಯುಕ್ತ 7 ದಿನದ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಿ ಕೊಡುವಲ್ಲಿ ಅನೇಕ ಸಮಸ್ಯೆಗಳಾಗುತ್ತಿವೆ. ಆ ಸಮಸ್ಯೆಗಳಿಗೆ ಕಾರಣ ಹಾಗೂ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ಅಧಿಕಾರಿಗಳು ಗಮನಹರಿಸಬೇಕಿದೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರಿಗೆ ಸೌಲಭ್ಯಗಳನ್ನು ಸರ್ಕಾರದಿಂದ ಮತ್ತು ಪಂಚಾಯಿತಿ ಅನುದಾನದಲ್ಲಿ ಹಂತ-ಹಂತವಾಗಿ ಹೇಗೆ ಒದಗಿಸಬೇಕು ಎನ್ನುವುದನ್ನು ಅಧಿಕಾರಿಗಳಿಗೆ ಸಲಹೆ ನೀಡಿದರು.

ಹುಬ್ಬಳ್ಳಿಯ ಬಿಐಇಆರ್‌ಟಿ ಆದ ಕೆ.ಎಂ. ಗದಗೇರಿ ಮಾತನಾಡಿ, ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುವಲ್ಲಿ ವಿ.ಆರ್.ಡಬ್ಲ್ಯೂ. ಅವರ ಕರ್ತವ್ಯ ಪ್ರಮುಖವಾದದ್ದು ಎಂದರು.

ಶಾಲೆಯ ಸಂಯೋಜಕ ಬಸವರಾಜ್ ಮ್ಯಾಗೇರಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ರಾಜಕುಮಾರ ಸಾಭೋಜಿ, ಶಿಕ್ಷಕ ಅಣ್ಣಪ್ಪ ಕೋಳಿ, ಹುಬ್ಬಳ್ಳಿಯ ಎಂ.ಆರ್.ಡಬ್ಲ್ಯೂ. ಮಹಾಂತೇಶ ಕುರ್ತಕೋಟಿ, ಎಪಿಡಿ ಸಂಸ್ಥೆಯ ಪಿಜಿಯೋಥೆರಪಿಸ್ಟ ಹೊನ್ನಪ್ಪಸ್ವಾಮಿ ಸೇರಿದಂತೆ ಹಲವರಿದ್ದರು. ಜಿಲ್ಲಾ ಸಂಯೋಜಕ ಆಶಿಫ್ ಆಡಿನ ವಂದಿಸಿದರು.