ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ‌ಪರಿಷತ್ತು ಆಶ್ರಯದಲ್ಲಿ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ದ.ಕ.ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಸಂಜೆ ಕನ್ನಡ ಸಾಂಸ್ಕೃತಿಕ ದಿಬ್ಬಣ ದೊಂದಿಗೆ ಸಂಭ್ರಮದ ಚಾಲನೆ ದೊರೆತಿದೆ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ‌ಪರಿಷತ್ತು ಆಶ್ರಯದಲ್ಲಿ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ದ.ಕ.ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಸಂಜೆ ಕನ್ನಡ ಸಾಂಸ್ಕೃತಿಕ ದಿಬ್ಬಣ ದೊಂದಿಗೆ ಸಂಭ್ರಮದ ಚಾಲನೆ ದೊರೆತಿದೆ. ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರದ ಬಳಿಯಿಂದ‌ ಆರಂಭಗೊಂಡ ದಿಬ್ಬಣಕ್ಕೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಚಾಲನೆ ನೀಡಿದರು. ಈ ವೇಳೆ ಸಮ್ಮೇಳನಾಧ್ಯಕ್ಷ ರಾದ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಕಾಸರಗೋಡು ಜಿಲ್ಲಾ ಕಸಾಪ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬುಬಕ್ಕರ್ ಅಮ್ಮುಂಜೆ, ಕಾರ್ಯದರ್ಶಿ ದೇವಪ್ಪ ಕುಲಾಲ್, ರಾಮದಾಸ ಬಂಟ್ವಾಳ ಮತ್ತು ಚಂದ್ರಹಾಸ ಶೆಟ್ಟಿ ಮಂಗಳೂರು, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಉಡುಪ, ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಹೋಬಳಿ ಅಧ್ಯಕ್ಷರಾದ ಪಿ.ಮಹಮ್ಮದ್, ಗಣೇಶ ಪ್ರಸಾದ ಪಾಂಡೇಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ, ಸಮ್ಮೇಳನ ಸ್ವಾಗತ ಸಮಿತಿ ಪ್ರಮುಖರಾದ ಕೆ.ಕೆ.ಪೂಂಜ, ಸರಪಾಡಿ ಅಶೋಕ ಶೆಟ್ಟಿ, ಬೇಬಿ ಕುಂದರ್, ಪ್ರಭಾಕರ ಪ್ರಭು, ಎಚ್ಕೆ ನಯನಾಡು, ಮೆರವಣಿಗೆ ಸಂಚಾಲಕರಾದ ಉಮ್ಮರ್ ಮಂಚಿ, ಸಹಸಂಚಾಲಕರಾದ ನಾರಾಯಣ ಸಿ. ಪೆರ್ನೆ, ಬದ್ರುದ್ದೀನ್ ಮಂಚಿ, ರವೀಂದ್ರ ಕುಕ್ಕಾಜೆ, ಮಹಮ್ಮದ್, ಸಹಿತ ನಾನಾ ಸಮಿತಿಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. ಮೆರವಣಿಗೆಗೆ ಮೆರುಗು ತಂದ ದೈತ್ಯ ವ್ಯಕ್ತಿ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ದಿಬ್ಬಣದಲ್ಲಿ ಬೆಂಕಿಯುಗುಳುತ್ತಿದ್ದ ದೈತ್ಯವ್ಯಕ್ತಿ ಪ್ರತಿಕೃತಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಮೆರವಣಿಗೆಯಲ್ಲಿ ಕೊಂಬು ಕಹಳೆಯ ಜೊತೆಗೆ ಶಾರದಾ ಚೆಂಡೆಬಳಗ, ಅಳಿಕೆ ಸತ್ಯಸಾಯಿ ವಿದ್ಯಾ ಸಂಸ್ಥೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು, ಚಿಣ್ಣರಲೋಕದ ಗೊಂಬೆ ಕುಣಿತ, ಕೀಲು ಕುದುರೆ ಮತ್ತು ಬ್ಯಾಂಡ್, ಸಾಗರದ ಮಹಿಳಾ ಡೊಳ್ಳು ಕುಣಿತ, ಕೊಡೆಗಳು (ಛತ್ರಿಗಳು), ಐಕಳದ ಕೊರಗಜ್ಜ ಡೋಲು ಬಳಗದ ಡೋಲು ಮತ್ತು ಕೊಳಲು, ಬಡಕಬೈಲು ಭಗವದ್ಗೀತಾ ಭಜನಾಮಂದಿರದ ಮಕ್ಕಳ ಕುಣಿತ ಭಜನೆ, ಮಣಿಹಳ್ಳದ ಸಾಂಪ್ರಾದಾಯಿಕ ಕಂಬಳದ ಕೋಣಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ತಂದಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ:

ಕನ್ನಡದ ಎಲ್ಲಾ ಮಕ್ಕಳು ಒಂದೇ ಎಂಬ ಸಹೋದರತೆಯನ್ನು ಬೆಳೆಸುವ ಕಾರ್ಯ ಈ ಸಮ್ಮೇಳನದಿಂದ‌ ಆಗಲಿ ಉದ್ಯಮಿ ರಘುನಾಥ ಸೋಮಯಾಜಿ ಹೇಳಿದರು. ದ.ಕ.ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೂರು ದಿನಗಳ‌ ಸಮ್ಮೇಳನ ಅರ್ಥಪೂರ್ಣವಾಗಿ ಸಂಪನ್ನಗೊಳ್ಳಲಿ ಎಂದವರು ಶುಭ ಹಾರೈಸಿದರು. ಸಮ್ಮೇಳನಾಧ್ಯಕ್ಷ ,ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪ್ರಮುಖರಾದ ಸರಪಾಡಿ ಅಶೋಕ್ ಶೆಟ್ಟಿ, ರಾಮದಾಸ ಬಂಟ್ವಾಳ, ಅಬೂಬಕರ್ ಅಮ್ಮುಂಜೆ ಮೊದಲಾದವರು ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಕೊಟ್ಟಾರ ಭರತಾಂಜಲಿ‌ ನೃತ್ಯ ತಂಡದ ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ವಿದ್ವಾನ್ ಶ್ರೀಧರ್ ಹೊಳ್ಳ ಶಿಷ್ಯವರ್ಗದಿಂದ ಭರತನಾಟ್ಯ ಮನೋಜ್ಞವಾಗಿ ಮೂಡಿಬಂತು. ಬಳಿಕ ಕುಂದಾಪುರದ ಸತೀಶ್ ಪೈ ಕುಳ್ಳಪ್ಪು ನಿರ್ದೇಶನದ ಮೂರು ಮುತ್ತು ಕನ್ನಡ ನಾಟಕ‌ ಪ್ರದರ್ಶನಗೊಂಡಿತು.