ಬಂಟ್ವಾಳ: ವ್ಯವಹಾರದಲ್ಲಿ ಯಶಸ್ಸು ಸಾಧಿಸುವುದು ಕೇವಲ ಕಟ್ಟಡ ಅಥವಾ ವ್ಯವಸ್ಥೆಗಳ ಮೂಲಕ ಅಲ್ಲ, ಸಮಾಜದೊಂದಿಗೆ ಉತ್ತಮ ಸಂಬಂಧ ಮತ್ತು ವಿಶ್ವಾಸ ಗಳಿಸುವ ಮೂಲಕ ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ‌ ಆಳ್ವ ಹೇಳಿದರು.

ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ರಂಗೋಲಿ ಸೂಟ್ಸ್ ಆ್ಯಂಡ್ ರೆಸ್ಟ್ರೋ ಬಾರ್ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನವೀಕರಣಗೊಂಡ ಸಂಸ್ಥೆಯ ಹೊಸ ಸೇವಾ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಹಾಗೂ ಸದಾನಂದ ಡಿ. ಶೆಟ್ಟಿ ರಂಗೋಲಿ ಕುಟುಂಬವು ಸಮಾಜದೊಂದಿಗೆ ಉತ್ತಮ ನಂಟು ಹೊಂದಿರುವ ಆದರ್ಶ ಕುಟುಂಬವಾಗಿದೆ. ಈ ಕುಟುಂಬದೊಂದಿಗೆ ತನಗೂ ದೀರ್ಘಕಾಲದ ಆತ್ಮೀಯ ಸಂಬಂಧವಿದ್ದು, ಅವರ ಉದ್ಯಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, 24 ವರ್ಷಗಳ ಹಿಂದೆ ಎಲ್ಲರ ಸಹಕಾರದಿಂದ ಆರಂಭವಾದ ರಂಗೋಲಿ ಹೋಟೆಲ್ ಇಂದು ಬಂಟ್ವಾಳ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಹೆಸರಾಗಿರುವ ಸಂಸ್ಥೆಯಾಗಿದೆ ಎಂದರು.

ಆಗ ತಾನು ಉದ್ಘಾಟಿಸಿದ್ದ ಈ ಸಂಸ್ಥೆಯ ನವೀಕರಣ ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಅವಕಾಶ ಸಿಕ್ಕಿರುವುದು ಸಂತೋಷದ ವಿಷಯ ಎಂದು ಶುಭ ಹಾರೈಸಿದರು.ಆಡಳಿತ ಪಾಲುದಾರ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಸ್ವಾಗತಿಸಿ ಪ್ರಸ್ತಾವನೆಗೈದು, 2002ರ ಡಿ.22ರಂದು ಬಿ.ಸಿ.ರೋಡ್‌ನಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ರಂಗೋಲಿ ಹೋಟೆಲ್ ಆರಂಭವಾಗಿದ್ದು, ಇಂದಿನವರೆಗೆ ಸಾವಿರಾರು ಸಭೆ, ಶುಭ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ ಎಂದು ಹೇಳಿದರು.

25ನೇ ವರ್ಷದ ಸಂದರ್ಭದಲ್ಲಿ ಸಂಸ್ಥೆಯನ್ನು ನವೀಕರಿಸಲಾಗಿದ್ದು, ಎಸಿ ಹಾಲ್, ನವೀಕೃತ ರೆಸ್ಟೋರೆಂಟ್, ಕಿಚನ್ ಹಾಗೂ 27 ಹವಾ ನಿಯಂತ್ರಿತ ಕೊಠಡಿಗಳೊಂದಿಗೆ ಹೊಸ ಸೌಲಭ್ಯಗಳನ್ನು ಒದಗಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಸಾಮಾನ್ಯ ಹಾಗೂ ಫ್ಯಾಮಿಲಿ ಗ್ರಾಹಕರಿಗಾಗಿ ಪ್ರತ್ಯೇಕ ವಿಭಾಗಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಬಂಟ್ವಾಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಸಂಸ್ಥೆಯ ಪಾಲುದಾರರಾದ ಸದಾನಂದ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಗುರುತಿಸಿ ಗೌರವಿಸಲಾಯಿತು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷಾತ್ ಶೆಟ್ಟಿ ವಂದಿಸಿದರು