ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಶ್ವವಿಖ್ಯಾತ ದಸಾರ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಆಯ್ಕೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಆಯ್ಕೆಯನ್ನು ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ.ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಯನ್ನು ವಿರೋಧಿಸುವವರಿಗೆ ಏನು ಹೇಳಬೇಕು? ಇದು ಧಾರ್ಮಿಕತೆಯ ಅತಿರೇಕ. ಧರ್ಮಾಂಧತೆ ಸಂವಿಧಾನಕ್ಕೆ ಆಘಾತಕಾರಿ. ಬಹುತ್ವದ ವಿಚಾರಕ್ಕೂ ಇದು ಆಘಾತ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ, ಸಾಮಾಜಿಕವಾಗಿ ಎಲ್ಲರೂ ಒಂದೇ ಎಂದು ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೇ ಇದೆ. ದಸರಾ ಸಾಂಸ್ಕೃತಿಕ ಜೀವನ ಅಭಿವ್ಯಕ್ತಿಗೊಳಿಸುವ ಹಬ್ಬ. ದಸರಾ ಎನ್ನುವುದು ಧರ್ಮದ ಆಚರಣೆಯಲ್ಲ. ಧರ್ಮದ ವಿಚಾರದ ಚರ್ಚೆ ಜನರಿಗೆ ಬಿಟ್ಟಿದ್ದು. ಆದರೆ, ಬಾನು ಮುಷ್ತಾಕ್ ಅವರು ಇಡೀ ದೇಶಕ್ಕೆ ಕಿರೀಟ ಅಲ್ಲವೇ? ನೀವು ಅವರನ್ನು ಯಾವ ರೀತಿ ನೋಡುತ್ತೀರಾ? ಯಾಕೆ ಅವರನ್ನು ಪ್ರತ್ಯೇಕ ಮಾಡುತ್ತೀರಾ? ಸಾಂಸ್ಕೃತಿಕವಾಗಿ ಆಚರಿಸುವ ನಾಡಹಬ್ಬಕ್ಕೆ ಸಾಂವಿಧಾನಾತ್ಮಕವಾಗಿ ಆಯ್ಕೆ ಮಾಡಿದ್ದೇವೆ. ಇದರ ಬಗ್ಗೆ ಯಾಕೆ ಅಪಸ್ವರ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಹೈದಾರಲಿ-ಟಿಪ್ಪು ದಸರಾ ಮುನ್ನಡೆಸಿದ್ದರು:ಇನ್ನು ಮೈಸೂರಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಹೈದಾರಲಿ- ಟಿಪ್ಪು. ಇದನ್ನು ಮರೆಯಬೇಡಿ. ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಕರೆಯುತ್ತೇವೆ. ಎಸ್.ಎಲ್.ಭೈರಪ್ಪ ಅವರನ್ನು ಕರೆದಾಗ ನಾವು ಟೀಕೆ ಮಾಡಿಲ್ಲ. ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಮಾಡುತ್ತೇವೆ. ಟೀಕೆ ಮಾಡುವವರಿಗೆ ತಾಳ್ಮೆ ಇರಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಸೇಠ್ ತಿರುಗೇಟು ನೀಡಿದರು.ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಪಾಪದ ಕೆಲಸ: ಎಚ್.ಕೆ.ಪಾಟೀಲ್‌ಧರ್ಮಸ್ಥಳ ಗ್ರಾಮ ಪ್ರಕರಣವನ್ನು ರಾಜಕಾರಣಕ್ಕಾಗಿ ಬಳಕೆ ಮಾಡುವ ಪ್ರಯತ್ನ ಯಾರೂ ಮಾಡಬಾರದು. ಯಾರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೋ ಅವರು ಪಾಪದ ಕೆಲಸ ಮಾಡಿದಂತೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದ ಪವಿತ್ರ ಸ್ಥಳಕ್ಕೆ ಕಳಂಕ, ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡಿದ್ದರು. ಇದೆಲ್ಲಾ ತಪ್ಪು ದಾರಿಗೆ ಎಳೆದಿರುವ ಪ್ರಯತ್ನ ಎಂದು ತಾಂತ್ರಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಾಬೀತಾಗಿದೆ. ಇದೀಗ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವವರಿಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.ಬಿಜೆಪಿಯಿಂದ ಧರ್ಮ ರಕ್ಷಣಾ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತನಿಖೆಯ ಬೆಳವಣಿಗೆ ಧರ್ಮಸ್ಥಳ ಭಕ್ತರಿಗೆಲ್ಲ ಸಮಾಧಾನ, ನೆಮ್ಮದಿ ಮೂಡಿದೆ. ಈ ವಿಷಯ ಶ್ರದ್ಧೆಗೆ ಸಂಬಂಧಿಸಿದ್ದು. ಭಕ್ತಿ ಭಾವನೆಗಳಿಗೆ ಬಹಳ ಹತ್ತಿರವಾದ ಸಂಬಂಧ ಇರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಈ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವವರಿಗೂ ಹಾಗೂ ಅವರಿಗೂ (ಕಳಂಕ ತರಲು ಯತ್ನಿಸಿದವರು) ಏನೂ ವ್ಯತ್ಯಾಸ ಇರುವುದಿಲ್ಲ ಎಂದರು.
===