ಬಿಗಿ ಭದ್ರತೆಯಲ್ಲಿಂದು ದಸರಾಕ್ಕೆ ಬಾನು ಚಾಲನೆ

| Published : Sep 22 2025, 01:01 AM IST

ಸಾರಾಂಶ

ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ‘ನಾಡಹಬ್ಬ’ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಸೋಮವಾರದಿಂದ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ‘ನಾಡಹಬ್ಬ’ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಸೋಮವಾರದಿಂದ ಆರಂಭವಾಗಲಿದೆ. ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ದಸರಾ ಹಿನ್ನೆಲೆಯಲ್ಲಿ ಇಡೀ ‘ಸಾಂಸ್ಕೃತಿಕ ನಗರಿ’ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ. ಸಾಮಾನ್ಯವಾಗಿ ಹತ್ತು ದಿನ ನಡೆಯುವ ದಸರಾ, ಈ ಬಾರಿ ಹನ್ನೊಂದು ದಿನಗಳು ನಡೆಯುತ್ತಿರುವುದು ವಿಶೇಷ.

ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯಗೆ ಸಿಎಂ ಆಗಿ ಇದು 8ನೇ ದಸರಾ. ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಇದು 5ನೇ ದಸರಾ. ದಸರಾ ಆಚರಣೆಗಾಗಿ ಸಿಎಂ 40 ಕೋಟಿ ರು.ಅನುದಾನ ನೀಡಿದ್ದಾರೆ.ಬಿಗಿ ಪೊಲೀಸ್‌ ಬಂದೋಬಸ್ತ್‌:

ಈ ಬಾರಿ ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ ನಂತರ ಸಾಕಷ್ಟು ವಿವಾದ ಉಂಟಾಗಿತ್ತು. ಕನ್ನಡತಾಯಿ ಭುವನೇಶ್ವರಿ ಕುರಿತ ಅವರ ಹೇಳಿಕೆ ಕೂಡ ವಿವಾದದ ಕೇಂದ್ರಬಿಂದುವಾಗಿತ್ತು. ಅವರ ಆಯ್ಕೆಯನ್ನು ಪ್ರಶ್ನಿಸಿ, ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟಿನ ಮೊರೆ ಹೋಗಲಾಗಿತ್ತು. ಎಲ್ಲೆಡೆ, ತಕರಾರು ಅರ್ಜಿ ವಜಾ ಆಗಿದ್ದು, ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸಲು ಹಾದಿ ಸುಗಮವಾಗಿದೆ.

ಈ ಮಧ್ಯೆ, ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡಿಬೆಟ್ಟದ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶ ಎಂಬ ನಿರ್ಬಂಧ ವಿಧಿಸಲಾಗಿದೆ.ಗಣ್ಯರು ಭಾಗಿ:ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಶಿವರಾಜ್‌ ತಂಗಡಗಿ, ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ಈಶ್ವರ ಖಂಡ್ರೆ, ಭೈರತಿ ಸುರೇಶ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.ಇತರ ಕಾರ್ಯಕ್ರಮಗಳಿಗೂ ಚಾಲನೆ:

ಈ ಮಧ್ಯೆ, ಸಂಜೆ 5ಕ್ಕೆ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಪಂಡಿತ ಎಂ. ವೆಂಕಟೇಶ್‌ಕುಮಾರ್‌ ಅವರಿಗೆ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದಕ್ಕೂ ಮೊದಲು, ಚಾಮುಂಡಿಬೆಟ್ಟದಲ್ಲಿ ದಸರೆಗೆ ಚಾಲನೆ ಸಿಕ್ಕ ನಂತರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯನವರು ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಸಂಜೆ 4ಕ್ಕೆ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಅವರು ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.

ಸಂಜೆ 4ಕ್ಕೆ ಸಿದ್ದಾರ್ಥನಗರದ ಕಾವಾದಲ್ಲಿ ಚಿತ್ರಕಲಾ ಶಿಬಿರ, ಸಂಜೆ 5ಕ್ಕೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಪುಸ್ತಕಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಂಜೆ 5ಕ್ಕೆ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಯೋಗ ದಸರಾವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸಂಜೆ 6.30ಕ್ಕೆ ಸಯ್ಯಾಜಿರಾವ್‌ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌, ಸಂಜೆ 7.30ಕ್ಕೆ ವಸ್ತು ಪ್ರದರ್ಶನವನ್ನು ಸಿದ್ದರಾಮಯ್ಯ ಉದ್ಘಾಟಿಸುವರು.ಪೊಲೀಸರ ಭದ್ರತೆಯಲ್ಲಿ ಮೈಸೂರಿಗೆ ಬಂದ ಬಾನು:ದಸರಾ ಉದ್ಘಾಟಕರಾದ ಬಾನು ಮುಷ್ತಾಕ್ ಅವರು ಭಾನುವಾರ ಸಂಜೆ ಪೊಲೀಸರ ಬಿಗಿ ಭದ್ರತೆಯಲ್ಲಿ ಮೈಸೂರಿಗೆ ಆಗಮಿಸಿದರು. ಪೈಲಟ್ ಮತ್ತು ಎಸ್‌ಕಾರ್ಟ್ ವಾಹನಗಳ ಬೆಂಗಾವಲಿನಲ್ಲಿ ಹಾಸನದಿಂದ ಮೈಸೂರಿಗೆ ರಸ್ತೆಯ ಮೂಲಕ ಆಗಮಿಸಿದ ಬಾನು ಮುಷ್ತಾಕ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅವರು ಉಳಿದುಕೊಂಡಿರುವ ಹೋಟೆಲ್‌ ಬಳಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಬಾನು ಮುಷ್ತಾಕ್ ವಾಸ್ತವ್ಯ ಹೂಡಿದ್ದು, ಹೋಟೆಲ್‌ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಾನು ಮುಷ್ತಾಕ್ ಅವರು ಸೋಮವಾರ ಬೆಳಗ್ಗೆ ಹೋಟೆಲ್‌ನಿಂದ ಚಾಮುಂಡಿಬೆಟ್ಟಕ್ಕೆ ತೆರಳಿ, ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.