ಮೈಸೂರು ಅರಮನೇಲಿ ಇಂದಿನಿಂದ ಖಾಸಗಿ ದರ್ಬಾರ್‌

| Published : Sep 22 2025, 01:01 AM IST

ಸಾರಾಂಶ

ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸೆ.22 (ಸೋಮವಾರ) ರಿಂದ ಅ.2 ರವರೆಗೆ ಖಾಸಗಿ ದರ್ಬಾರ್ ನಡೆಯಲಿದ್ದು, ಇದಕ್ಕಾಗಿ ಅರಮನೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ಸೆ.22 (ಸೋಮವಾರ) ರಿಂದ ಅ.2 ರವರೆಗೆ ಖಾಸಗಿ ದರ್ಬಾರ್ ನಡೆಯಲಿದ್ದು, ಇದಕ್ಕಾಗಿ ಅರಮನೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನ್ನು ಸೋಮವಾರ ಆರಂಭಿಸಲಿದ್ದು, 11ನೇ ಬಾರಿಗೆ ರತ್ನಖಚಿತ ಸಿಂಹಾಸನಾರೋಹಣ ಮಾಡಲಿದ್ದಾರೆ.ಯದುವೀರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಳಿಕ ಎರಡನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಹಿಂದೆ ರಾಜವಂಶಸ್ಥರಾದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜನಪ್ರತಿನಿಧಿಯಾಗಿ ಖಾಸಗಿ ದರ್ಬಾರ್ ನಡೆಸಿದ್ದರು.ಖಾಸಗಿ ದರ್ಬಾರ್ ನಡೆಸಲು ಯದುವೀರ್ ಅವರಿಗೆ ಪತ್ನಿ ತ್ರಿಷಿಕಾ ಕುಮಾರಿ, ಪುತ್ರರಾದ ಆದ್ಯವೀರ್, ಯುಗಾಧ್ಯಕ್ಷ, ತಾಯಿ ಪ್ರಮೋದಾದೇವಿ ಒಡೆಯರ್, ಕುಟುಂಬ ವರ್ಗದವರು ಹಾಗೂ ಅರಮನೆಯ ಸಿಬ್ಬಂದಿ ಸಾಥ್ ನೀಡಲಿದ್ದಾರೆ.ಖಾಸಗಿ ದರ್ಬಾರ್‌: ರಾಜವಂಶಸ್ಥರ ಸಂಪ್ರದಾಯ

ನವರಾತ್ರಿಯ ಮೊದಲ ದಿನ ಅರಮನೆಯಲ್ಲಿ ಎಣ್ಣೆಶಾಸ್ತ್ರ, ಮಂಗಳ ಸ್ನಾನ, ಸಿಂಹಾಸನಕ್ಕೆ ಸಿಂಹ ಜೋಡಣೆ, ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್‌ ಹಾಗೂ ವಾಣಿವಿಲಾಸ ಅರಮನೆಯಲ್ಲಿ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಕನಕಧಾರಣೆ, ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಹಸುಗಳ ಆಗಮನ, ದರ್ಬಾರ್ ಹಾಲ್‌ನಲ್ಲಿ ನವಗ್ರಹ ಕಳಸ ಪೂಜೆ ಮತ್ತು ಸಿಂಹಾಸನಾರೋಹಣ, ಕನ್ನಡಿ ತೊಟ್ಟಿಗೆ ಶ್ರೀ ಚಾಮುಂಡೇಶ್ವರಿ ತರುವುದು ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯದಂತೆ ನಡೆಯಲಿದೆ.ಬೆಳಗ್ಗೆ ಎಣ್ಣೆ ಮಜ್ಜನ ಮುಗಿಸಿ ಬರುವ ಯದುವೀರ್‌ಗೆ ಪತ್ನಿ ತ್ರಿಷಿಕಾ ಕುಮಾರಿ ಪಾದಪೂಜೆ ನೆರವೇರಿಸುವರು. ನಂತರ, ರಾಜವಂಶಸ್ಥರ ಸಂಪ್ರದಾಯದಂತೆ ದರ್ಬಾರ್ ಹಾಲ್‌ಗೆ ಯದುವೀರ್ ಆಗಮಿಸಿ, ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಅದನ್ನು ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಲಿದೆ.

ಯದುವೀರ್ ಅವರು ಪ್ರತಿದಿನ ಸಂಜೆ ರಾಜ ಪೋಷಾಕಿನಲ್ಲಿ ಸಿಂಹಾಸನರೂಢರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.