ಗಡಿ ಭಾಗದಲ್ಲಿ ಕನ್ನಡ ಕಾರ್ಯಕ್ರಮ ನಡೆಸಿ

| Published : Sep 22 2025, 01:01 AM IST

ಸಾರಾಂಶ

ಗುಡಿಬಂಡೆ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹೋಬಳಿ ಅಥವಾ ಗಡಿ ಭಾಗದಲ್ಲಿ ಮಾಡಿದರೆ ಗಡಿ ಭಾಗದಲ್ಲಿ ಹಾಗೂ ಗಾಮೀಣ ಭಾಗದಲ್ಲಿ ಕನ್ನಡದ ಅರಿವನ್ನು ಮೂಡಿಸಿದಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಕನ್ನಡ ಕಾರ್ಯಕ್ರಮಗಳು ಪಟ್ಟಣಕ್ಕೆ ಸೀಮಿತವಾಗದೆ ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಜಾಗೃತಿ ಮೂಡಿಸುವಂತಾಗಲಿ ಎಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ. ಅಮೀಜ್ ಜಾನ್ ಸಲಹೆ ನೀಡಿದರು.

ಪಟ್ಟಣದ ವಿನಾಯಕನಗರದ ಶಿಕ್ಷಕ ರಾಮಾಂಜನೆಯ್ಯ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಡಿ ಭಾಗದಲ್ಲಿ ಸಮ್ಮೇಳನ ಮಾಡಿ

ತಾಲ್ಲೂಕಿನ 7 ಕನ್ನಡ ಸಾಹಿತ್ಯ ಸಮ್ಮೇಳನಗಳು ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ನಡೆದಿವೆ. ಮುಂದಿನ ಸಮ್ಮೇಳನಗಳನ್ನು ಹೋಬಳಿ ಅಥವಾ ಗಡಿ ಭಾಗದಲ್ಲಿ ಮಾಡಿದರೆ ಗಡಿ ಭಾಗದಲ್ಲಿ ಹಾಗೂ ಗಾಮೀಣ ಭಾಗದಲ್ಲಿ ಕನ್ನಡದ ಅರಿವನ್ನು ಮೂಡಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಗುಡಿಬಂಡೆ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನಕ್ಕೆ 23ಗುಂಟೆ ಜಮೀನು ಮಂಜೂರು ಮಾಡಿಸಿದ್ದೇವೆ. ಕನ್ನಡ ಭವನ ನಿರ್ಮಾಣಕ್ಕೆ ತಾಲ್ಲೂಕಿನ ಎಲ್ಲಾ ಕನ್ನಡ ಪರ ಸಂಘಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಶಾಸಕರ ಬಳಿ ಒತ್ತಾಯ ಮಾಡಬೇಕಿದೆ ಎಂದರು.

ತಿಂಗಳಿಗೆರಡು ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆ ಸಿದ್ದಪಡಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ವತಿಯಿಂದ ಶಿಕ್ಷಕ ರಾಮಾಂಜಿನೆಯ್ಯ ದಂಪತಿಗೆ ಗೌರವ ಸಮರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಆರ್. ವೆಂಕಟಾಚಲಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಕಸಾಪ ಗೌರವ ಕಾರ್ಯದರ್ಶಿ ವಿ. ಶ್ರೀರಾಮಪ್ಪ, ಸಂಚಾಲಕ ಶ್ರೀನಿವಾಸ್, ಕರವೇ ಅಧ್ಯಕ್ಷ ಶ್ರೀನಿವಾಸ್ ಯಾದವ್, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್ ಮತ್ತಿತರರು ಭಾಗವಹಿಸಿದ್ದರು