ಸಾರಾಂಶ
ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಹೋದರೆ ಹಿಂದೂ ಧಾರ್ಮಿಕ ವಿಚಾರದಲ್ಲಿ ಧಕ್ಕೆ ಉಂಟಾಗುತ್ತದೆ. - ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ
ಬೆಂಗಳೂರು : ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಹೋದರೆ ಹಿಂದೂ ಧಾರ್ಮಿಕ ವಿಚಾರದಲ್ಲಿ ಧಕ್ಕೆ ಉಂಟಾಗುತ್ತದೆ. ಹಿಂದೂ-ಮುಸ್ಲಿಂ ನಡುವಿನ ಸೌಹಾರ್ದತೆ ಹಾಳಾಗುತ್ತದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಹಿತಿ ಬಾನು ಮುಷ್ತಾಕ್ ಅವರಿಗೆ ಸಿಕ್ಕಿರುವ ಪ್ರಶಸ್ತಿ ಸಾಮಾನ್ಯವಲ್ಲ. ಅದು ಜಾಗತಿಕ ಪ್ರಶಸ್ತಿ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಒಪ್ಪಿಕೊಂಡಿದ್ದಾರೆ. ಹಿಂದೂಗಳ ಧಾರ್ಮಿಕ ಹಬ್ಬವನ್ನು ಹಿಂದೂಗಳೇ ಉದ್ಘಾಟಿಸಬೇಕು ಎಂದು ಕೆಲ ಹಿಂದೂಗಳು ಬಾನು ಮುಷ್ತಾಕ್ ಅವರಿಗೆ ಮನವಿ ಮಾಡಿದ್ದಾರೆ.
ದಸರಾ ಪೂರ್ತಿ ಹಿಂದೂಗಳ ಧಾರ್ಮಿಕ ಹಬ್ಬ. ನಾನು ಚಾಮುಂಡಿ ಬೆಟ್ಟದಲ್ಲಿ 10 ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಇದು ಅರ್ಥವಾಗಿದೆ. ಉದ್ಘಾಟನೆಗೆ ಹೋದರೆ ಹಿಂದೂ-ಮುಸ್ಲಿಮರ ಮಧ್ಯೆ ಸೌಹಾರ್ದ ಹಾಳಾಗುತ್ತದೆ. ಸೌಹಾರ್ದಕ್ಕೆ ಧಕ್ಕೆ ಆದಾಗ ನಾವೇ ಅದರಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಪ್ರವಾದಿ ಮೊಹಮ್ಮದ್ ಅವರ ಬೋಧನೆಗೆ ಧಕ್ಕೆ ತಂದಂತಾಗುತ್ತದೆ. ಹೀಗಾಗಿ ದಸರಾ ಉದ್ಘಾಟನೆ ಒಪ್ಪಿಕೊಳ್ಳಬೇಡಿ ಎಂದು ಬಾನು ಮುಷ್ತಾಕ್ ಅವರಿಗೆ ನಾನು ಕೈ ಮುಗಿದು ಮನವಿ ಮಾಡುವುದಾಗಿ ಅಜೀಂ ಹೇಳಿದರು.
ದೇಶಪ್ರೇಮಿ ಹಿಂದೂಗಳಿಂದ ಉದ್ಘಾಟಿಸಿ:
ಯಾವ ಮುಸಲ್ಮಾನರೂ ಮುಖ್ಯಮಂತ್ರಿ ಬಳಿ ಹೋಗಿ ದಸರಾ ಉದ್ಘಾಟನೆ ಮಾಡಿಸಿ ಎಂದು ಕೇಳಿಲ್ಲ. ದೇಶಪ್ರೇಮಿ ಹಿಂದೂಗಳಿಂದ ದಸರಾ ಉದ್ಘಾಟನೆ ಮಾಡಿಸಿ. ಸರ್ಕಾರಕ್ಕೆ ಬಾನು ಮುಷ್ತಾಕ್ ಅವರ ಬಗ್ಗೆ ಅಷ್ಟು ಗೌರವ ಇದ್ದರೆ ಬೇರೆ ರೀತಿಯಲ್ಲಿ ಗೌರವಿಸಬೇಕು. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಬೇಡ. ಬಾನು ಮುಷ್ತಾಕ್ ಅವರೇ ಸಿದ್ಧರಾಮಯ್ಯ ಅವರ ಬಳಿ ಹೋಗಿ ನನ್ನಿಂದ ಜನರಲ್ಲಿ ವ್ಯತ್ಯಾಸ ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.