ಚಾಮರಾಜನಗರ ದಸರಾ ಆಚರಣೆ ನಡೆಸಿ: ಶಿವಶಂಕರ್ ಚಟ್ಟು ಆಗ್ರಹ

| Published : Sep 06 2025, 01:01 AM IST

ಚಾಮರಾಜನಗರ ದಸರಾ ಆಚರಣೆ ನಡೆಸಿ: ಶಿವಶಂಕರ್ ಚಟ್ಟು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ದಸರಾ ಆಚರಣೆಯನ್ನು ಈ ಬಾರಿಯೂ ನಡೆಸಬೇಕು ಎಂದು ಜಿಲ್ಲಾ ಯುವ ಕಲಾವಿದರ ಬಳಗದ ಕಾರ್ಯದರ್ಶಿ ಶಿವಶಂಕರ್ ಚಟ್ಟು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಚಾಮರಾಜನಗರ ದಸರಾ ಆಚರಣೆಯನ್ನು ಈ ಬಾರಿಯೂ ನಡೆಸಬೇಕು ಎಂದು ಜಿಲ್ಲಾ ಯುವ ಕಲಾವಿದರ ಬಳಗದ ಕಾರ್ಯದರ್ಶಿ ಶಿವಶಂಕರ್ ಚಟ್ಟು ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯೊಂದರಲ್ಲಿ ಈ ಬಾರಿ ಚಾಮರಾಜನಗರದಲ್ಲಿ ದಸರಾ ಆಚರಣೆ ಮಾಡುವುದಿಲ್ಲ ಎಂದು ಹೇಳಿರುವುದು ಕಲಾವಿದರಲ್ಲಿ ನೋವು ತಂದಿದೆ. ಆದ್ದರಿಂದ ಈ ಬಾರಿಯೂ ಚಾಮರಾಜನಗರ ದಸರಾ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮೈಸೂರು ಒಡೆಯರ ಪರಂಪರೆಯ ಭಾಗವಾಗಿರುವ ಚಾಮರಾಜನಗರದಲ್ಲಿ ಸರ್ಕಾರದಿಂದಲೇ 2007ರಿಂದ ಗ್ರಾಮೀಣ ದಸರಾ ಎಂಬ ಚಾಮರಾಜನಗರ ಹೆಸರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, 2013ರಿಂದ ಚಾಮರಾಜನಗರ ದಸರಾ ಎಂಬ ಹೆಸರಿನಿಂದಲೇ ದಸರಾ ಉತ್ಸವಗಳು ಆಯೋಜನೆಗೊಳ್ಳುತ್ತಿವೆ ಎಂದರು.

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮರಾಜನಗರ ದಸರಾ ಆಚರಣೆ ಜಾರಿಗೆ ತಂದಿದ್ದರು. ಆದರೆ, ಈಗ ಅವರೇ ಈ ಬಾರಿ ಚಾಮರಾಜನಗರ ದಸರಾ ಕಾರ್ಯಕ್ರಮ ಮಾಡುವುದಿಲ್ಲ ಎಂದು ಹೇಳಿದ್ದು, ಇದರಿಂದಾಗಿ ಜಿಲ್ಲೆಯ ಸಾಕಷ್ಟು ಕಲಾವಿದರು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡುವ ಮೂಲಕ ಈ ಬಾರಿಯೂ ದಸರಾ ಆಚರಣೆ ಮಾಡುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ದಸರಾ ನಿಲ್ಲಿಸಿದ ಅಪಕೀರ್ತಿ ಬರಲಿದೆ. ಅಲ್ಲದೇ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೇರ ಹೊಣೆಯಾಗಲಿದ್ದಾರೆ ಎಂದರು.

ಈ ದಸರಾ ಆಚರಣೆಯಿಂದ ಜಿಲ್ಲೆಯ ಸಾವಿರಾರು ಕಲಾವಿದರಿಗೆ ಅವಕಾಶಗಳು ಸಿಗುತ್ತಿತ್ತು. ಅವರ ಜೀವನಕ್ಕೂ ದಾರಿದೀಪವಾಗಿತ್ತು. ಒಂದು ವೇಳೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಿದ್ದರೆ ಕಲಾವಿದರೆಲ್ಲರೂ ಸಭೆ ನಡೆಸಿ ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಲಾವಿದರ ಬಳಗದ ದಡದಹಳ್ಳಿ ರಮೇಶ್, ಕೃಷ್ಣಮೂರ್ತಿ, ಪ್ರವೀಣ್, ರಮೇಶ್ ಪಾಪಯ್ಯ, ಸ್ವಾಮಿ, ಸುಶೀಲಾ ಇದ್ದರು.