ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನಕ್ಕೆ ವಿರೋಧ

| Published : Sep 06 2025, 01:01 AM IST

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನಕ್ಕೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿಂದೂ ಜನಜಾಗೃತಿ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕವು ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಅನೇಕ ಗಣ್ಯರನ್ನು ಹೊಂದಿದೆ. ಪದ್ಮಭೂಷಣ ಪುರಸ್ಕೃತ ಡಾ. ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳನ್ನು ಪಡೆದಿದ್ದಾರೆ. ಅವರ ಕೃತಿಗಳು ರಾಷ್ಟ್ರ ಮಟ್ಟದಲ್ಲಿ ಕೀರ್ತಿಯನ್ನು ತಂದಿವೆ. ಇಂತಹ ಕೀರ್ತಿಶಾಲಿ ವ್ಯಕ್ತಿಯನ್ನು ಕಡೆಗಣಿಸಿ, ವಿವಾದಾತ್ಮಕ ಅಭಿಪ್ರಾಯ ಹೊಂದಿರುವವರನ್ನು ಆಹ್ವಾನಿಸುವುದು ಸಮಂಜಸವಲ್ಲ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಮೈಸೂರು ದಸರಾ ಹಬ್ಬದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿಂದೂ ಜನಜಾಗೃತಿ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಸಮಿತಿ, ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತ ಈ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಲತಾಕುಮಾರಿಗೆ ಮನವಿ ಸಲ್ಲಿಸಿದೆ.

ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಅನಂತರಾಜು ಮಾಧ್ಯಮದೊಂದಿಗೆ ಮಾತನಾಡಿ, ದಸರಾ ಹಬ್ಬದ ಧಾರ್ಮಿಕ ಹಾಗೂ ಪಾರಂಪರಿಕ ಮಹತ್ವವನ್ನು ಸ್ಮರಿಸಿ, “ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ನವರಾತ್ರಿಯ ಒಂಬತ್ತು ದಿನಗಳಲ್ಲಿ ಕಾಳಿ, ಮಹಾಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಆರಾಧನೆ ನಡೆಯುತ್ತದೆ. ವಿಜಯದಶಮಿಯಂದು ಚಾಮುಂಡೇಶ್ವರಿ ದೇವಿ ಮಹಿಷಾಸುರನ ಸಂಹಾರ ಮಾಡಿದ ನೆನಪಿಗಾಗಿ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿತ ಮುಖ್ಯ ಅತಿಥಿಯು ದೇವಿಯ ಮೇಲಿನ ಶ್ರದ್ಧೆ ಮತ್ತು ನಾಡದೇವಿಯ ಮೇಲಿನ ಗೌರವ ಹೊಂದಿರಬೇಕು“ ಎಂದರು. ಬಾನು ಮುಷ್ತಾಕ್ ಅವರ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ, ಅವರು ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆಂದು ಹೇಳಿರುವುದು, ಜೊತೆಗೆ ದತ್ತಪೀಠ ಹೋರಾಟದ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಪರವಾಗಿ ನಿಲುವು ತಳೆದಿರುವುದು ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದು ಆರೋಪಿಸಿದೆ. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಖಂಡಿಸಿದರು. ಕರ್ನಾಟಕವು ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಅನೇಕ ಗಣ್ಯರನ್ನು ಹೊಂದಿದೆ. ಪದ್ಮಭೂಷಣ ಪುರಸ್ಕೃತ ಡಾ. ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳನ್ನು ಪಡೆದಿದ್ದಾರೆ. ಅವರ ಕೃತಿಗಳು ರಾಷ್ಟ್ರ ಮಟ್ಟದಲ್ಲಿ ಕೀರ್ತಿಯನ್ನು ತಂದಿವೆ. ಇಂತಹ ಕೀರ್ತಿಶಾಲಿ ವ್ಯಕ್ತಿಯನ್ನು ಕಡೆಗಣಿಸಿ, ವಿವಾದಾತ್ಮಕ ಅಭಿಪ್ರಾಯ ಹೊಂದಿರುವವರನ್ನು ಆಹ್ವಾನಿಸುವುದು ಸಮಂಜಸವಲ್ಲ ಎಂದರು. ಸರ್ಕಾರವು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣ ಹಿಂತೆಗೆದು, ಡಾ. ಎಸ್.ಎಲ್. ಭೈರಪ್ಪ ಅವರಂತಹ ಗಣ್ಯರನ್ನು ಆಹ್ವಾನಿಸುವ ಮೂಲಕ ಹಬ್ಬದ ಪಾವಿತ್ರ್ಯವನ್ನು ಕಾಪಾಡಬೇಕು. ಇದರಿಂದ ಹಿಂದೂ ಭಕ್ತರ ಭಾವನೆಗಳಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿ ಕೋರಿದರು.

ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸುಜಾತಾ, ಗೋವಿಂದರಾಜು, ಪ್ರಕಾಶ್, ವೇದ, ಲಕ್ಷ್ಮೀ, ಪುಷ್ಪ, ದೇವಿಕ, ಇತರರು ಉಪಸ್ಥಿತರಿದ್ದರು.