ಸಾರಾಂಶ
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನುಈ ಬಾರಿ ಅರ್ಥಪೂರ್ಣವಾಗಿ ಹಾಗೂ ವೈವಿಧ್ಯಮಯವಾಗಿ ಆಚರಿಸುವ ಬಗ್ಗೆ ಶ್ರೀ ಕ್ಷೇತ್ರ ಬಪ್ಪನಾಡು ಜ್ಞಾನ ಮಂದಿರದಲ್ಲಿ ಸಮಿತಿಯ ಪೂರ್ವಭಾವಿ ಸಭೆ ನೆರವೇರಿತು.
ಮೂಲ್ಕಿ: ಈ ಬಾರಿಯ ಮೂಲ್ಕಿಯ ಬಪ್ಪನಾಡು ಗಣೇಶೋತ್ಸವದ 50ನೇ ವರ್ಷಾಚರಣೆಯ ಸುವರ್ಣ ಸಂಭ್ರಮ ಗಣೇಶೋತ್ಸವ ನಾಡಿಗೆ ಮಾದರಿಯಾಗಲಿ, ಎಲ್ಲರ ಸಹಕಾರವಿರಲಿ ಎಂದು ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ಹೇಳಿದ್ದಾರೆ.ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನುಈ ಬಾರಿ ಅರ್ಥಪೂರ್ಣವಾಗಿ ಹಾಗೂ ವೈವಿಧ್ಯಮಯವಾಗಿ ಆಚರಿಸುವ ಬಗ್ಗೆ ಶ್ರೀ ಕ್ಷೇತ್ರ ಬಪ್ಪನಾಡು ಜ್ಞಾನ ಮಂದಿರದಲ್ಲಿ ನಡೆದ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿ ಕಾರ್ಯದರ್ಶಿ ಸುನೀಲ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ, ಪ್ರತಿದಿನ ಅನ್ನ ಸಂತರ್ಪಣೆ, ಜೊತೆಗೆ ಗಣೇಶೋತ್ಸವವನ್ನು ಊರಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಸಂಘಟನೆ, ಸಾಮರಸ್ಯ, ಒಗ್ಗಟ್ಟಿನ ಮೂಲಕ ಆಚರಿಸಲು ಎಲ್ಲರ ಸಹಕಾರ ಮುಖ್ಯ. ಇದಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚರಿಸಲಾಗಿದ್ದು ಯುವಕರಿಗೆ ಪ್ರಾಶಸ್ತ್ಯ ನೀಡಲಾಗಿದೆಯೆಂದು ತಿಳಿಸಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ನರಸಿಂಹ ಭಟ್, ಗೋಪಾಲಕೃಷ್ಣ ಉಪಾಧ್ಯಾಯ, ಸಮಿತಿ ಕೋಶಾಧಿಕಾರಿ ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.ಮೂಲ್ಕಿ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್, ಅವಿಭಜಿತ ದ.ಕ.ಹಾಗೂ ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಮಹಿಮ್ ಹೆಗ್ಡೆ ಮತ್ತಿತರರು ಮಾತನಾಡಿದರು. ಸಂಜೀವ ದೇವಾಡಿಗ ವಂದಿಸಿದರು.