ಬಪ್ಪನಾಡು ಜಾತ್ರೆ ಶಯನೋತ್ಸವ: ಮಲ್ಲಿಗೆ ಪ್ರಸಾದ ವಿತರಣೆ

| Published : Apr 01 2024, 12:54 AM IST

ಸಾರಾಂಶ

ಈ ಬಾರಿ ಮಲ್ಲಿಗೆ ಅಟ್ಟೆಗೆ 1,200 ರು. ದುಬಾರಿಯಾಗಿದ್ದರೂ ಭಕ್ತರು ಸುಮಾರು 15 ಸಾವಿರ ಅಂದರೆ 60 ಸಾವಿರಕ್ಕೂ ಮಿಕ್ಕಿ ಚಂಡು ಮಲ್ಲಿಗೆ ಹೂವನ್ನು ಭಕ್ತರು ಬಪ್ಪನಾಡು ಶ್ರೀ ದೇವಿಗೆ ಸಮರ್ಪಿಸಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲಿಗೆ ಪ್ರಿಯೆ ದುರ್ಗೆಗೆ ಮಲ್ಲಿಗೆ ಹೂವಿನ ಶಯನೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಬಾರಿ ಮಲ್ಲಿಗೆ ಅಟ್ಟೆಗೆ 1,200 ರು. ದುಬಾರಿಯಾಗಿದ್ದರೂ ಭಕ್ತರು ಸುಮಾರು 15 ಸಾವಿರ ಅಂದರೆ 60 ಸಾವಿರಕ್ಕೂ ಮಿಕ್ಕಿ ಚಂಡು ಮಲ್ಲಿಗೆ ಹೂವನ್ನು ಭಕ್ತರು ಬಪ್ಪನಾಡು ಶ್ರೀ ದೇವಿಗೆ ಸಮರ್ಪಿಸಿದರು. ಶನಿವಾರ ರಾತ್ರಿ ಶ್ರೀ ದೇವರ ಉತ್ಸವಬಲಿ ನಡೆದ ಬಳಿಕ ಮಲ್ಲಿಗೆ ಹೂವನ್ನು ಗರ್ಭಗುಡಿ ಒಳಗಡೆ ದೇವರಿಗೆ ಅರ್ಪಿಸಿ ಶಯನೋತ್ಸವ ನಡೆಸಲಾಯಿತು.

ಭಾನುವಾರ ಬೆಳಗ್ಗೆ ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕವಾಟೋದ್ಘಾಟನೆ, ಮಹಾಪೂಜೆ, ತುಲಾಭಾರ ನಡೆದು ಭಕ್ತರಿಗೆ ಮಲ್ಲಿಗೆ ಪ್ರಸಾದ ವಿತರಣೆ ನಡೆಯಿತು.

ಸಹಸ್ರಾರು ಭಕ್ತಾದಿಗಳು ಶಿಸ್ತುಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು ಶ್ರೀದೇವರ ಪ್ರಸಾದ ಸ್ವೀಕರಿಸಿದರು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಲ್ಲಿಗೆ ಪ್ರಿಯೆ ಎಂದೇ ಖ್ಯಾತಿ ಪಡೆದಿರುವ ಬಪ್ಪನಾಡು ಶ್ರೀ ದುರ್ಗೆಗೆ ಶಯನೋತ್ಸವ ಬಪ್ಪನಾಡಿನ ವಿಶೇಷತೆ. ದೇವಳದಲ್ಲಿ ಸಂಜೆ ಉತ್ಸವ ಬಲಿ,ಓಕುಳಿ,ಪೇಟೆ ಸವಾರಿಯಾಗಿ ರಾತ್ರಿ ಶ್ರೀ ದೇವಿ ಮತ್ತು ಭಗವತಿಯರ ಭೇಟಿ ನಡೆದು ಮಹಾ ರಥೋತ್ಸವ ನಡೆಯಿತು.