ನಮ್ಮ ಭಾಗದ ನೀರಾವರಿ ಅಭಿವೃದ್ಧಿಗೆ ಮಾಜಿ ಸಚಿವ ದಿ. ಬಾಪೂಗೌಡ ದರ್ಶನಾಪುರ ಅವರ ಕೊಡುಗೆ ಅಪಾರ ಎಂದು ರೈತಪರ ಚಿಂತಕ, ಹಿರಿಯ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಮ್ಮ ಭಾಗದ ನೀರಾವರಿ ಅಭಿವೃದ್ಧಿಗೆ ಮಾಜಿ ಸಚಿವ ದಿ. ಬಾಪೂಗೌಡ ದರ್ಶನಾಪುರ ಅವರ ಕೊಡುಗೆ ಅಪಾರ ಎಂದು ರೈತಪರ ಚಿಂತಕ, ಹಿರಿಯ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ತಮ್ಮ ದೂರದೃಷ್ಟಿ, ಜೀವಪರ ಹಾಗೂ ಮಾನವೀಯಪರ ಕಾಳಜಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿ ಸಗರನಾಡಿಗೆ ನೀರು ಕೊಟ್ಟ ಪುಣ್ಯಾತ್ಮರಾಗಿದ್ದಾರೆ ಎಂದು

ಜಿಲ್ಲೆಯ ಶಹಾಪುರದ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ, ಭಾನುವಾರ ಸಿ. ಬಿ. ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ, ಜನಾನುರಾಗಿ, ಮಾಜಿ ಸಚಿವ ದಿ. ಬಾಪೂಗೌಡ ದರ್ಶನಾಪುರ ಅವರ 38ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ಕೇಂದ್ರ ಕಚೇರಿ ಭೀಮರಾಯನಗುಡಿಯಲ್ಲಿ ಪ್ರಾರಂಭಿಸಿ, ನಮ್ಮ ಭಾಗದ ನೀರಾವರಿ ಅಭಿವೃದ್ಧಿಗೆ ನಾಂದಿ ಹಾಡಿದರು. ಇದರಿಂದ ಶಹಾಪುರ ತಾಲೂಕು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ, ಕರ್ನಾಟಕದಲ್ಲಿ ವಿಶಿಷ್ಟವಾಗಿ ಗುರುತಿಸಲು ಸಾಧ್ಯವಾಯಿತು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬಾಪೂಗೌಡರು ಎಲ್ಲರೂ ಮೆಚ್ಚುವ ಸಂಪನ್ಮೂಲ ರಾಜಕಾರಣಿಯಾಗಿದ್ದರು ಎಂದು ಹಲವಾರು ನಿರ್ಧೇಶನಗಳ ಮೂಲಕ ಬಾಪುಗೌಡ ಜೊತೆಗಿನ ತಮ್ಮ ಒಡನಾಟ ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು.

ಅಂದಿನ ಹಲವಾರು ರಾಜಕೀಯ ಸ್ಥಿತ್ಯಂತರಗಳ ಸಂದರ್ಭದಲ್ಲಿ ಅವಿಭಜಿತ ಕಲ್ಬುರ್ಗಿ ಜಿಲ್ಲೆಯಲ್ಲಿ ನನ್ನಂತಹ ಅನೇಕ ನಾಯಕರನ್ನು ಬೆಳೆಸಿ ಪ್ರೋತ್ಸಾಹಿಸಿದ ಬಾಪೂಗೌಡರು, ಕೃಷಿ, ನೀರಾವರಿ, ಶಿಕ್ಷಣ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದವರು ಎಂದು ಕೇದಾರಲಿಂಗಯ್ಯ ಹಿರೇಮಠ ತಿಳಿಸಿದರು.

ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಮಾತನಾಡಿ, ನಾರಾಯಣಪುರ ಡ್ಯಾಂನ ಮೂಲಕ ನಮ್ಮ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿದ ಬಾಪೂಗೌಡರನ್ನು ಪ್ರತಿಯೊಬ್ಬ ಕೃಷಿಕರು ಪ್ರತಿನಿತ್ಯ ಸ್ಮರಿಸಬೇಕು. ಕೃಷಿ, ಶಿಕ್ಷಣ, ಸಾಹಿತ್ಯ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಬಾಪೂಗೌಡರು ನೀಡಿದ ಕೊಡುಗೆ ಅಪಾರವಾಗಿದೆ. ಮೌಲ್ಯಾಧಾರಿತ ರಾಜಕಾರಣಿಯಾಗಿ ನಾಡಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಹಿರಿಯ ಮುಖಂಡ ಚಂದ್ರಶೇಖರ ಆರಬೋಳ ಅವರು ಬಾಪೂಗೌಡ ದರ್ಶನಾಪುರ ಅವರ ವ್ಯಕ್ತಿತ್ವ ಮತ್ತು ಅವರ ಸಾಧನೆ ಕುರಿತು ಮಾತನಾಡಿದರು. ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ವೇದಮೂರ್ತಿ ಬಸವಯ್ಯ ಶರಣರು, ನಗನೂರಿನ ಶರಣಪ್ಪ ಶರಣರು, ಕೆಂಭಾವಿಯ ಚನ್ನಬಸವ ಶಿವಚಾರ್ಯರು ಸಾನಿಧ್ಯ ವಹಿಸಿದ್ದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಘೇವರಚಂದ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ, ಸಂಗೀತ ಕಲಾವಿದರಾದ ಶರಣಬಸವ ವಠಾರ, ಮಲ್ಲಯ್ಯ ಹಿರೇಮಠ ಬಾಪುಗೌಡ ದರ್ಶನಾಪುರ ಅವರ ಜೀವನ ಸಾಧನೆ ಕುರಿತು ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ, ಹಿರಿಯ ಮುಖಂಡಾದ ಶಂಕ್ರಣ್ಣ ವಣಿಕ್ಯಾಳ, ಸುರೇಶ ಸಜ್ಜನ್, ಶಿವಮಾಹಂತಪ್ಪ ಸಾಹು, ಸಣ್ಣನಿಂಗಪ್ಪ ನಾಯ್ಕೋಡಿ, ಬಸನ್ನಗೌಡ ಸುಬೇದಾರ, ಗೌಡಪ್ಪಗೌಡ ಆಲ್ದಾಳ, ಸಿದ್ದಲಿಂಗಣ್ಣ ಆನೆಗುಂದಿ, ಮಲ್ಲಣ್ಣ ಉಳಂಡಗೇರಿ,‌ ಮಾನಸಿಂಗ್ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಅರುಣಕುಮಾರ ಜೇವರ್ಗಿ ನಿರೂಪಿಸಿದರು, ಪ್ರಾಂಶುಪಾಲ ಶಿವಲಿಂಗಣ್ಣ ಸಾಹು ಸ್ವಾಗತಿಸಿದರು, ಶಿಕ್ಷಕ ಶರಣಯ್ಯಸ್ವಾಮಿ ಹಿರೇಮಠ ವಂದಿಸಿದರು.

---ಫೋಟೊ-----

15ವೈಡಿಆರ್‌6 : ಭೀಮರಾಯನಗುಡಿಯಲ್ಲಿ ದಿ. ಬಾಪೂಗೌಡ ದರ್ಶನಾಪುರ ಪುತ್ಹಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.

-

15ವೈಡಿಆರ್‌7 :

ಶಹಾಪುರದ ಸಿ.ಬಿ. ಪ್ರೌಢ ಶಾಲೆಯ ಆವರಣದಲ್ಲಿ ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಜನಾನುರಾಗಿ ದಿ. ಬಾಪೂಗೌಡ ದರ್ಶನಾಪುರ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.