ಬಾಪೂಜಿ ಸಂಘ 3-4 ಸಾವಿರ ಜನರಿಗೆ ಉದ್ಯೋಗ ನೀಡಲಿದೆ: ಬಸನಗೌಡ ಪಾಟೀಲ ಯತ್ನಾಳ

| Published : Aug 11 2025, 01:57 AM IST

ಬಾಪೂಜಿ ಸಂಘ 3-4 ಸಾವಿರ ಜನರಿಗೆ ಉದ್ಯೋಗ ನೀಡಲಿದೆ: ಬಸನಗೌಡ ಪಾಟೀಲ ಯತ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಯ ಬಾಪೂಜಿ ಸೌಹಾರ್ದ ಸಂಘ ಇದೀಗ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪ್‌ ಸೊಸೈಟಿ ಆಗಿದೆ. 634ಕ್ಕೂ ಅಧಿಕ ಜನರಿಗೆ ಸೊಸೈಟಿ ಉದ್ಯೋಗ ನೀಡಿದ್ದು, ಮುಂಬರುವ ದಿನಗಳಲ್ಲಿ ಕನಿಷ್ಠ 3 ರಿಂದ 4 ಸಾವಿರ ಜನರಿಗೆ ಉದ್ಯೋಗ ನೀಡಿ, ಆ ಕುಟುಂಬಗಳಿಗೆ ಅನ್ನ ಹಾಕುವ ಸಂಸ್ಥೆಯಾಗಿ ಬೆಳೆಯಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಸ್.ಆರ್. ಪಾಟೀಲ ಸಮೂಹ ಸಂಸ್ಥೆಯ ಬಾಪೂಜಿ ಸೌಹಾರ್ದ ಸಂಘ ಇದೀಗ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪ್‌ ಸೊಸೈಟಿ ಆಗಿದೆ. 634ಕ್ಕೂ ಅಧಿಕ ಜನರಿಗೆ ಸೊಸೈಟಿ ಉದ್ಯೋಗ ನೀಡಿದ್ದು, ಮುಂಬರುವ ದಿನಗಳಲ್ಲಿ ಕನಿಷ್ಠ 3 ರಿಂದ 4 ಸಾವಿರ ಜನರಿಗೆ ಉದ್ಯೋಗ ನೀಡಿ, ಆ ಕುಟುಂಬಗಳಿಗೆ ಅನ್ನ ಹಾಕುವ ಸಂಸ್ಥೆಯಾಗಿ ಬೆಳೆಯಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನವನಗರದ ಬಾಪೂಜಿ ಬ್ಯಾಂಕ್ ಆವರಣದಲ್ಲಿ ಭಾನುವಾರ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪ್‌ ಸೊಸೈಟಿ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೇವಲ ಎರಡು ಸೌಹಾರ್ದ ಸಹಕಾರಿ ಸಂಘಗಳಿಗೆ ಮಾತ್ರ ಮಲ್ಟಿಸ್ಟೇಟ್ ಬ್ಯಾಂಕಿಗೆ ಸಹಕಾರ ಇಲಾಖೆ ಎನ್ಒಸಿ ನೀಡಿದ್ದು, ಒಂದು ಎಸ್.ಆರ್. ಪಾಟೀಲ ನೇತೃತ್ವದ ಬಾಪೂಜಿ ಸೌಹಾರ್ದ ಸಹಕಾರಿ ಮತ್ತೊಂದು ವಿಜಯಪುರದ ನನ್ನ ಸಿದ್ಧಸಿರಿ ಸೌಹಾರ್ದ ಸಂಘ. ಇದರಿಂದ ಈ ಎರಡು ಸಂಸ್ಥೆಗಳ ಬಗ್ಗೆ ಅವರಿಗಿರುವ ವಿಶ್ವಾಸ ಎತ್ತಿ ತೋರಿಸುತ್ತದೆ. ಬಾಪೂಜಿ ಸಹಕಾರಿಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದ್ದು, ಸದ್ಯ ಅವರು ಮಹಾರಾಷ್ಟ್ರದಲ್ಲಿ ಶಾಖೆ ಆರಂಭಿಸಬಹುದಾಗಿದೆ. ನಮ್ಮ ಸಂಸ್ಥೆಗೆ ಇನ್ನೊಂದು ವಾರದಲ್ಲಿ ಅನುಮತಿ ಸಿಗಲಿದೆ ಎಂದು ಹೇಳಿದರು.

ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಇವೆ ಎಂದರೆ ಅದಕ್ಕೆ ಕಾರಣವೇ ಸೌಹಾರ್ದ ಸಂಘಗಳು. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾಲ ಸಿಗಲ್ಲ. ಅವರು ಸಿಬಿಲ್ ರೇಟ್ ಬೇಕು ಅಂತಾರೆ. ಆದರೆ, ಕೆಲವರು ಯಾವುದೋ ಪರಿಸ್ಥಿತಿಯಲ್ಲಿ ಲಾಸ್ ಆಗಿರುತ್ತಾರೆ. ಅಂತವರಿಗೆ ಸಾಲವನ್ನೇ ಕೊಡಲ್ಲ. ಆದರೆ, ಸಹಕಾರಿ ಸಂಘಗಳು ಹಾಗಲ್ಲ. ನಿಯತ್ತಿದ್ದರೆ ಬಿದ್ದವರಿದ್ದರೂ ಸಾಲ ಕೊಟ್ಟು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತವೆ ಎಂದು ಹೇಳಿ ಕೆಲವು ಉದಾಹರಣೆ ಸಹ ಮುಂದಿಟ್ಟರು.

ಮೆಡಿಕಲ್‌ ಕಾಲೇಜು ಆರಂಭ:ಈ ವಿಚಾರದಲ್ಲಿ ನಾನು ಮತ್ತು ಎಸ್.ಆರ್. ಪಾಟೀಲರು ಒಬ್ಬರಿಗೊಬ್ಬರು ಕಾಫಿ ಮಾಡುತ್ತೇವೆ. ಅವರು ಏನಾದರೂ ಸಂಸ್ಥೆ ಆರಂಭಿಸಿದಾಗ ನಾನು ಅದನ್ನು ಫಾಲೋ ಮಾಡುತ್ತೇನೆ. ನಾನು ಮಾಡಿದಾಗ ಅವರು ಫಾಲೋ ಮಾಡುತ್ತಾರೆ. ಇದೀಗ ಎಸ್.ಆರ್.ಪಾಟೀಲ ಅವರು ಮೆಡಿಕಲ್ ಕಾಲೇಜು ಆರಂಭಿಸಿದ್ದಾರೆ. ಅದನ್ನು ನೋಡಿಕೊಂಡು ಬಂದಿದ್ದೇನೆ. ನಾನು ಸಹ ವಿಜಯಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತೇನೆ ಎಂದು ಘೋಷಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ಎಸ್.ಆರ್. ಪಾಟೀಲ ಹಾಗೂ ಯತ್ನಾಳ ಅವರ ಈ ಎರಡು ಸೌಹಾರ್ದ ಸಂಘಗಳು ಈಗ ಮಲ್ಟಿಸ್ಟೇಟ್ ಕ್ರೆಡಿಟ್ ಸೊಸೈಟಿಗಳಾಗಿದ್ದು, ಮುಂದಿನ ದಿನಗಳಲ್ಲಿ ಆ ಎರಡು ಸಂಸ್ಥೆಗಳು ಮಲ್ಟಿ ನ್ಯಾಷನಲ್ ಬ್ಯಾಂಕುಳಾದರೂ ಆಶ್ಚರ್ಯವಿಲ್ಲ. ಬಿದ್ದವರನ್ನು ಮೇಲೆತ್ತುವ ಕೆಲಸ ಸಹಕಾರಿ ರಂಗದಿಂದ ಆಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಹಾಯ ಮಾಡಲು ಸಾಧ್ಯ ಇರುವ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ ಎಂದು ಅಭಿಪ್ರಾಯಪಟ್ಟರು.

ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಎನ್. ಪಾಟೀಲ, ನಿರ್ದೇಶಕರಾದ ಎ.ಎಂ. ಶೆಟ್ಟರ, ಎಸ್.ಕೆ. ಯಡಹಳ್ಳಿ, ಪಿ.ಆರ್. ಗೌಡರ, ಎಲ್.ಕೆ. ಬಳಗಾನೂರ, ಎ.ಎಸ್. ಲಾಗಲೋಟಿ, ಆರ್.ಪಿ. ಕಲಬುರ್ಗಿ, ಎಸ್.ಬಿ. ಬೆಳಗಲಿ, ಎಂ.ಎಸ್. ಪಾಟೀಲ, ಸಿ.ಎಂ. ನ್ಯಾಮಗೌಡ, ಎಸ್.ಎಸ್. ರಂಗನಗೌಡರ, ಎಸ್.ಸಿ. ಬಂಡಿವಡ್ಡರ, ಎಸ್.ಕೆ. ತಳವಾರ, ಎಂ.ಬಿ. ಅರಳಿಕಟ್ಟಿ, ವಿ.ಎಲ್. ಕುರ್ತಕೋಟಿ, ಎಸ್,ಎಸ್. ಪಾತ್ರೋಟ, ಪ್ರಧಾನ ವ್ಯವಸ್ಥಾಪಕ ವಿ.ಎಸ್. ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ಮೋಟಗಿ ಇದ್ದರು.

ಕನ್ಯಾ ಸಿಗಲು ಸಹಕಾರ ಸಂಘಗಳ ನೆರವು: ಉದ್ಯೋಗ ಇಲ್ಲವೆಂದರೆ ಕನ್ಯಾ ಸಹ ಸಿಗದಂತಹ ಪರಿಸ್ಥಿತಿ ಇದೆ. ಹೀಗಾಗಿಯೇ ಅನೇಕರು ನಮ್ಮ ಬಳಿ ನನ್ನ ಮಗನಿಗೆ ಕನ್ಯಾ ಕೊಡುತ್ತಿಲ್ಲ. ನಿಮ್ಮ ಸಂಸ್ಥೆಯಲ್ಲಿ ಕೆಲಸ ಕೊಡಿ ಎಂದು ಕೇಳಿಕೊಂಡು ಬರುತ್ತಾರೆ. ಇಲ್ಲಿ ಎಸ್.ಆರ್.ಪಾಟೀಲರಿಗೂ ಆ ಅನುಭವ ಆಗಿರುತ್ತದೆ. ಅವರ ಬಾಪೂಜಿ ಸೌಹಾರ್ದ ಸಂಘದಲ್ಲಿ ಸದ್ಯ 634 ಸಿಬ್ಬಂದಿ ಇದ್ದಾರಂತೆ. ಇದರಲ್ಲಿ ಕನಿಷ್ಠ 400 ಜನರ ಮದುವೆ ಈ ಬ್ಯಾಂಕಿನಲ್ಲಿ ಕೆಲಸ ಸಿಕ್ಕ ಬಳಿಕವೇ ಆಗಿರಬೇಕು. ಸೌಹಾರ್ದ, ಸಹಕಾರಿ ಸಂಘಗಳು ಬರೀ ಆರ್ಥಿಕವಾಗಿ ನೆರವು ನೀಡುವದಲ್ಲದೆ ಮದುವೆಯಾಗಲು ಸಹಕಾರ ನೀಡುತ್ತಿವೆ ಎಂದು ಶಾಸಕ ಯತ್ನಾಳ ಹಾಸ್ಯ ಮಾಡಿದರು.

ಎಸ್.ಆರ್. ಪಾಟೀಲ ಅವರ ಸಾಧನೆ ದೊಡ್ಡದಿದೆ. ಬಾಪೂಜಿ ಹೆಸರಿನಲ್ಲಿ ಬ್ಯಾಂಕ್ ತೆರೆದು ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆಸಿರುವುದು ಸಣ್ಣ ಸಾಧನೆಯಲ್ಲ. ಅದರ ಜೊತೆಗೆ ಗ್ರಾಮದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಿರುವುದು ಅವರ ಮತ್ತೊಂದು ಮೈಲುಗಲ್ಲು. ಬಾಪೂಜಿ ಸೌಹಾರ್ದದಲ್ಲಿ ನಾನು ಸಹ ಸಾಲ ಪಡೆದುಕೊಂಡಿದ್ದೇನೆ.

- ಎಚ್.ವೈ.ಮೇಟಿ ಶಾಸರು, ಅಧ್ಯಕ್ಷರು ಬಿಡಿಟಿಎ ಬಾಗಲಕೋಟೆ