ಸಾರಾಂಶ
ಆಸ್ತಿ ವಿಚಾರವಾಗಿ ದಾವೆ ಹೂಡಿದ್ದ ಕಕ್ಷಿದಾರರೊಬ್ಬರಿಗೆ ವಂಚಿಸಿದ್ದಾರೆಂಬ ದೂರಿನ ಮೇರೆಗೆ ಚಿತ್ರದುರ್ಗದ ವಕೀಲ ಜಿ.ಬಿ ಸೋಮಶೇಖರಪ್ಪ ಎಂಬುವರಿಗೆ ರಾಜ್ಯದ ಬಾರ್ ಕೌನ್ಸಿಲ್ ವಕೀಲರ ಕಾಯ್ದೆ 1961ರ ಕಲಂ 35ರ ಅಡಿ ನೋಟಿಸ್ ಜಾರಿ ಮಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು- ಚಿತ್ರದುರ್ಗ
ಆಸ್ತಿ ವಿಚಾರವಾಗಿ ದಾವೆ ಹೂಡಿದ್ದ ಕಕ್ಷಿದಾರರೊಬ್ಬರಿಗೆ ವಂಚಿಸಿದ್ದಾರೆಂಬ ದೂರಿನ ಮೇರೆಗೆ ಚಿತ್ರದುರ್ಗದ ವಕೀಲ ಜಿ.ಬಿ ಸೋಮಶೇಖರಪ್ಪ ಎಂಬುವರಿಗೆ ರಾಜ್ಯದ ಬಾರ್ ಕೌನ್ಸಿಲ್ ವಕೀಲರ ಕಾಯ್ದೆ 1961ರ ಕಲಂ 35ರ ಅಡಿ ನೋಟಿಸ್ ಜಾರಿ ಮಾಡಿದೆ.ಹೂವಿನಹಡಗಲಿ ಸಿವಿಲ್ ನ್ಯಾಯಾಲಯದಲ್ಲಿ ಆಸ್ತಿ ವಿಚಾರವಾಗಿ ಎಸ್.ಸಿದ್ದಯ್ಯ ಎಂಬುವರು ಹೂಡಿದ್ದ ದಾವೆಗೆ ವಕೀಲ ಸೋಮಶೇಖರಪ್ಪ ವಕಾಲತ್ತು ವಹಿಸಿದ್ದರು. ಅರ್ಜಿದಾರರಿಂದ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ನ್ಯಾಯಾಲಯದ ಕಲಾಪಗಳ ಮಾಹಿತಿ ನೀಡದೆ ಉದಾಸೀನ ತೋರಿದ್ದರು. ಜಿ.ಆರ್ ಓಂಕಾರಪ್ಪ ಎನ್ನುವ ವ್ಯಕ್ತಿ ತಾನೇ ಪ್ರಕರಣದ ಪ್ರತಿವಾದಿ ಎಂದು ಮತ್ತೊಬ್ಬ ವಕೀಲರ ಮೂಲಕ ವಕಾಲತ್ತು ಸಲ್ಲಿಸಿರುವ ವಿಷಯವ ಅರ್ಜಿದಾರರ ಗಮನಕ್ಕೆ ತಂದಿಲ್ಲ. ಅಲ್ಲದೆ ಓಂಕಾರಪ್ಪನೇ ಅರ್ಜಿದಾರನೆಂದು ಬಿಂಬಿಸಿ ಅದಕ್ಕೆ ತಕ್ಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರತಿವಾದಿಯೇ ಅಲ್ಲದ ಓಂಕಾರಪ್ಪನ ಪರವಾಗಿ ವಾದಗಳನ್ನು ಸಹ ನ್ಯಾಯಾಲಯದಲ್ಲಿ ಮಂಡಿಸಿದ್ದಾರೆ ಎಂದು ದೂರಲಾಗಿದೆ.ಅರ್ಜಿದಾರ ಎಸ್.ಸಿದ್ಧಯ್ಯ ಬಾರ್ ಕೌನ್ಸಿಲ್‌ಗೆ ವಿವರವಾದ ದೂರು ಸಲ್ಲಿಸಿ ಅರ್ಜಿದಾರರ ಪರವಾಗಿ ನ್ಯಾಯವಾಗಿ ನಿಲ್ಲದೆ ಇರುವ ವಕೀಲ ಸೋಮಶೇಖರಪ್ಪನವರು ಮೋಸ, ವಂಚನೆ ಮತ್ತು ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ. ಅರ್ಜಿದಾರರಿಂದ ಸೂಕ್ಷ್ಮವಾದ ಎಲ್ಲಾ ಮಾಹಿತಿ ಸಂಗ್ರಹಿಸಿ ಅವುಗಳನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ವಕೀಲರಾಗಿ ತಮ್ಮ ಕಕ್ಷಿದಾರರ ರಕ್ಷಣೆ ಮಾಡುವ ಬದಲು ಬೇರೆಯವರ ಜೊತೆ ಷಡ್ಯಂತರ ನಡೆಸಿ ಸ್ವಂತ ಕಕ್ಷಿದಾರರ ವಿರುದ್ಧವೇ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಿರುವುದು ವಕೀಲಿ ವೃತ್ತಿಯ ಧರ್ಮಕ್ಕ ವಿರುದ್ಧವಾದುದಾಗಿದೆ. ವಕೀಲಿ ವೃತ್ತಿಗೆ ಕಳಂಕ ತರುವ ಈ ವ್ಯಕ್ತಿಯ ವಿರುದ್ದ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಬಾರ್ ಕೌನ್ಸಿಲ್ ಗೆ ನೀಡಿದ ದೂರಿನಲ್ಲಿ ಸಿದ್ದಯ್ಯ ಮನವಿ ಮಾಡಿದ್ದಾರೆ.