ಮಣ್ಣೂರು ಗ್ರಾಮದಲ್ಲಿ ಯುವಕನ ಬರ್ಬರ ಕೊಲೆ

| Published : May 12 2024, 01:18 AM IST

ಸಾರಾಂಶ

ಭೀಮಾ ತೀರದಲ್ಲಿ ನಡೆದಿರುವ ಈ ಹತ್ಯೆಯ ಹಿಂದೆ ಅನೈತಿಕ ಸಂಬಂಧದ ಬಲವಾದ ಶಂಕೆ ಮೂಡಿದೆ. ಯುವಕ ರಂಜಾನ್‌ ಅಲಿಯಾಸ್‌ ಪಪ್ಪು ಎಂಬುವವನಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹಾಡುವಾಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ/ಅಫಜಲ್ಪುರ

ಅಫಜಲ್ಪುರ ತಾಲೂಕಿನ ಸಂಗಾಪುರ ಗ್ರಾಮದ ಯುವಕ ಜಾವೀದ್‌ ನಿಗೂಢ ಸಾವಿನ ಪ್ರಕರಣದ ಬೆನ್ನಲ್ಲೇ ಇದೇ ತಾಲೂಕಿನ ಭೀಮಾ ತೀರದ ಮಣ್ಣೂರು ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ರಮಜಾನ ಅಲಿಯಾಸ್‌ ಪಪ್ಪು ತಂದೆ ಮೈಹಿಬೂಬ್‌ ತಾರಾ (24) ಎಂಬ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಮಣ್ಣೂರಿನಿಂದ ಮಾಶಾಳಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯ ಜಮೀನು ಪಕ್ಕದಲ್ಲೇ ಈ ಹತ್ಯೆ ಸಂಭವಿಸಿದೆ. ಕೊಲೆಯ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಅಫಜಲ್ಪುರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಿಪಿಐ ಚೆನ್ನಯ್ಯ ಹಿರೇಮಠ, ಪಿಎಸ್‌ಐ ಮೆಹೆಬೂಬ್‌ ಅಲಿ ಮಣ್ಣೂರಿಗೆ ಭೇಟಿ ನೀಡಿದ್ದು ಅಪರಾಧ ಕೃತ್ಯ ನಡೆದ ಸ್ಥಳದಿಂದ ಸಾಕ್ಷಿ- ಪುರಾವೆ ಕಲೆ ಹಾಕಿದ್ದಾರೆ.

ಹಂತಕರ ಪತ್ತೆಗೆ ಅಫಜಲ್ಪುರ ಪೊಲೀಸರು ಬಲೆ ಬೀಸಿದ್ದಾರೆ. ಜಿಲ್ಲಾ ಎಸ್ಪಿ ಅಕ್ಷಯ ಹಾಕೆ ಅವರೂ ಮಣ್ಣೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ನಡೆದ ಹಳೆ ಮಾಶಾಳ ರಸ್ತೆಯ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ತಂಡದವರು ಭೇಟಿ ನೀಡಿ ಹಂತಕರಿಗಾಗಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ರಂಜಾನ್‌ ಉರ್ಫ್‌ ಪಪ್ಪು ತಾರಾ ಈತನ ಹತ್ಯೆಗೆ ಇರುವ ಕಾರಣಗಳ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೈದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಸ್ಥಳೀಯವಾಗಿ ವಿಾರಣೆ ನಡೆಸಿರುವ ಪೊಲೀಸರು ಪ್ರೀತಿ ವಿಚಾರಕ್ಕಾಗಿ ಹತ್ಯೆಯೋ ಅಥವಾ ಅನೈತಿಕ ಸಂಬಂಧ ಹಿನ್ನಲೆ ಹತ್ಯೆಯಾಗಿದೆಯೋ ಎಂಬ ಶಂಕೆ ಕಾಡಿದ್ದು ಈ ವಿಚಾರಗಳನ್ನಿಟ್ಟುಕೊಂಡೇ ತನಿಖೆಗಿಳಿದಿದ್ದಾರೆ.

ಮಧ್ಯಾಹ್ನ ತಂದೆಯನ್ನು ಹೊಲಕ್ಕೆ ಬಿಟ್ಟು ಬರುವಾಗ ದಾರಿಯಲ್ಲೇ ಹತ್ಯೆ: ಭೀಮಾ ತೀರದಲ್ಲಿ ನಡೆದಿರುವ ಈ ಹತ್ಯೆಯ ಹಿಂದೆ ಅನೈತಿಕ ಸಂಬಂಧದ ಬಲವಾದ ಶಂಕೆ ಮೂಡಿದೆ. ಯುವಕ ರಂಜಾನ್‌ ಅಲಿಯಾಸ್‌ ಪಪ್ಪು ಎಂಬುವವನಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹಾಡುವಾಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಣ್ಣೂರ ಗ್ರಾಮದ ಹಳೆ ಮಾಶಾಳ ರಸ್ತೆ ಜಮಿನು ಒಂದರಲ್ಲಿ ಘಟನೆ ನಡೆದಿದೆ.

ಮಧ್ಯಾಹ್ನ ಜಮೀನಿಗೆ ತನ್ನ ತಂದೆಯನ್ನು ದ್ವಿಚಕ್ರ ವಾಹನ ಮೇಲೆ ಹೊಲಕ್ಕೆ ಬಿಟ್ಟು ವಾಪಸ್ ಬರುವಾಗ ದುಷ್ಕರ್ಮಿಗಳು ಬೈಕ್ ನಿಲ್ಲಿಸಿ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಅಫಜಲ್ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅನೈತಿಕ ಸಂಬಂಧ ಶಂಕೆ: ಕೊಲೆಯಾದ ಯುವಕ ರಂಜಾನ್ ತಾರಾ ಗ್ರಾಮದ ವಿವಾಹಿತ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದನೆಂದು ಹೇಳಲಾಗುತ್ತಿದೆ.ಇದೇ ಕಾರಣಕ್ಕಾಗಿ ಹಲವು ಬಾರಿ ಮಹಿಳೆಯ ಸಂಬಂಧಿಕರು ಯುವಕನಿಗೆ ಎಚ್ಚರಿಕೆ ನೀಡಿದ್ದರೂ ಕೂಡಾ ಪದೇ ಪದೇ ಮಹಿಳೆ ಜತೆ ಮಾತನಾಡುವುದು ಮಾಡುತ್ತಿದ್ದನೆಂದು ಹೇಳಲಾಗಿದೆ. ಇದೇ ವಿಚಾರವಾಗಿ ಸೇಡು ಇಟ್ಟುಕೊಂಡು ಇಂದು ಮಧ್ಯಾಹ್ನ ರಮಜಾನ್‌ ಈತ ಜಮೀನಿಗೆ ಹೋಗುವುದನ್ನು ಗಮನಿಸಿದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಕೊಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.