ಸಾರಾಂಶ
ಜನನಿಬಿಡ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಬುಧವಾರ ಸಂಜೆ ಜರುಗಿದೆ.
ಕನ್ನಡಪ್ರಭ ವಾರ್ತೆ ಕಲಘಟಗಿ
ಜನನಿಬಿಡ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಹಾಲಿ ಸದಸ್ಯನನ್ನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಬುಧವಾರ ಸಂಜೆ ಜರುಗಿದೆ.ಮೃತ ವ್ಯಕ್ತಿಯನ್ನು ಭೋಗೇನಾಗರಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ, ಬಗಡಗೇರಿ ಗ್ರಾಮದ ನಿವಾಸಿ ನಿಂಗಪ್ಪ ಬಸಪ್ಪ ದಾಸಪ್ಪನವರ (35) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರವಾಗಿ ಸಂಬಂಧಿಕರೇ ನಿಂಗಪ್ಪನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮದ ಬಸ್ ನಿಲ್ದಾಣ ಹತ್ತಿರ ಸಂಜೆ ವೇಳೆ ನಿಂಗಪ್ಪ ಬಂದಾಗ ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದರಲ್ಲದೇ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ನಿಂಗಪ್ಪನಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸ್ಥಳಕ್ಕೆ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿತು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.