ತಳ ಮಟ್ಟದಲ್ಲಿರುವ ಬಂಟರನ್ನು ಮೇಲಕ್ಕೆ ತರುವ ಪ್ರಯತ್ನ ನಡೆಯಬೇಕಾಗಿದೆ. ಪ್ರತಿಯೊಬ್ಬ ಬಂಟರು ಬಿಪಿಎಲ್ ಕಾಡ್೯ನಿಂದ ಮುಕ್ತಿ ಪಡೆಯ ಬೇಕು ಎಂದು ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬರೋಡ ಶಶಿ ಕ್ಯಾಟರಿಂಗ್‌ನ ಮಾಲಕ ಶಶಿಧರ ಶೆಟ್ಟಿ ಬರೋಡ ಹೇಳಿದರು.

ಮಂಗಳೂರು: ತಳ ಮಟ್ಟದಲ್ಲಿರುವ ಬಂಟರನ್ನು ಮೇಲಕ್ಕೆ ತರುವ ಪ್ರಯತ್ನ ನಡೆಯಬೇಕಾಗಿದೆ. ಪ್ರತಿಯೊಬ್ಬ ಬಂಟರು ಬಿಪಿಎಲ್ ಕಾಡ್೯ನಿಂದ ಮುಕ್ತಿ ಪಡೆಯ ಬೇಕು ಎಂದು ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬರೋಡ ಶಶಿ ಕ್ಯಾಟರಿಂಗ್‌ನ ಮಾಲಕ ಶಶಿಧರ ಶೆಟ್ಟಿ ಬರೋಡ ಹೇಳಿದರು.

ಬಂಟ್ಸ್ ಹಾಸ್ಟೇಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಂಟರಲ್ಲಿ ಛಲ ಇದ್ದಾಗ ಮಾತ್ರ ಇಂಥವುಗಳನ್ನು ಮಾಡಲು ಸಾಧ್ಯವಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕಳೆದ ಏಳೆಂಟು ವರ್ಷಗಳಿಂದ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾಗಿ 25 ಕೋಟಿ ರುಪಾಯಿಗೂ ಮಿಕ್ಕಿ ಪರಿಹಾರ ಧನವನ್ನು ಬಡವರಿಗೆ ವಿತರಿಸಿದ್ದಾರೆ. ನಮ್ಮಲ್ಲಿ ಅನೇಕ ಸಾಧಕರಿದ್ದಾರೆ. ಡಾ.ಕೆ.ಪ್ರಕಾಶ್ ಶೆಟ್ಟಿ, ಕನ್ಯಾನ‌ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿಕಿರಣ್ ಶೆಟ್ಟಿ, ರಾಕ್ಷಿ ಬಿಲ್ಡಸ್೯ನ ರಾಜೇಶ್ ಶೆಟ್ಟಿ ಮೊದಲಾದವರ ಸಾಧನೆ ನಮಗೆಲ್ಲ ದಾರಿದೀಪವಾಗಿದೆ. ಇಂತಹ ಅನೇಕ ಮಂದಿ ಸಾಧಕರು ನಮ್ಮ ಸಮಾಜದಲ್ಲಿದ್ದಾರೆ. ಬಂಟ ಸಮಾಜ ಇತರ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಒಕ್ಕೂಟದ ನಿರ್ದೇಶಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಪರ ಕೆಲಸದಲ್ಲಿ ತೊಡಗಿಕೊಂಡಿದೆ‌. ಐಕಳ ಹರೀಶ್ ಶೆಟ್ಟಿಯವರ ಸಂಘಟನೆ ಮತ್ತು ಪದಾಧಿಕಾರಿಗಳ ಕೆಲಸ ಕಾರ್ಯಗಳಿಂದ ಒಕ್ಕೂಟ ಹಲವು ಕೋಟಿ ರು.ಗಳನ್ನು ಬಡವರ ವಿವಿಧ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದರು.

ಸಮಾರಂಭದಲ್ಲಿ ಉದ್ಯಮಿ ಒಕ್ಕೂಟದ ನಿರ್ದೇಶಕ, ಹುಬ್ಬಳ್ಳಿ- ಧಾರಾವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ವಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಬಡತನದಲ್ಲಿ ಹುಟ್ಟಿದ ನಾನು ಬಡತನ ಏನೆಂಬುದನ್ನು ತಿಳಿದಿದ್ದೇನೆ. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಕನಸಿನ ಯೋಜನೆ ಮುಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನ ನಿರ್ಮಾಣವಾಗುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಅನೇಕ ವರ್ಷಗಳಿಂದ ಸಮಾಜದ

ಕೆಲಸ ಮಾಡುತ್ತಿದ್ದಾರೆ ಅವರ ಹೆಸರಿನಲ್ಲಿ ನಾನು ಕೂಡಾ ಸಭಾಭವನ ನಿರ್ಮಿಸುತ್ತೇನೆ ಎಂದರು.

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಬಂಟರ ಸಂಘಗಳು ಪ್ರತೀ ವರ್ಷದಂತೆ ನೋಂದಾವಣೆಯನ್ನು ಮಾಡಿಕೊಂಡು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಮೂಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನವನ್ನು ಡಿಸೆಂಬರ್ ತಿಂಗಳ ಒಳಗೆ

ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಎಲ್ಲರ ಸಹಕಾರ ಬೇಕು ಎಂದರು.

ಪೋಷಕ ಸದಸ್ಯ ನವೀನ್ ಚಂದ್ರ ಶೆಟ್ಟಿ ಪಡುಬಿದ್ರಿ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಕಾಲೇಜು ದಿನಗಳಿಂದಲೇ ಸಮಾಜ ಸೇವೆಯನ್ನು ಮಾಡಿಕೊಂಡಿರುವುದನ್ನು ನಾನು ನೋಡಿದ್ದೇನೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ನಾನು ಐಕಳ ಹರೀಶ್ ಶೆಟ್ಟಿಯವರೊಂದಿಗೆ ಅನೇಕ ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ್ದೇನೆ. ಒಕ್ಕೂಟದಲ್ಲೂ ಅವರ ಜೊತೆಗಿದ್ದು ಕೆಲಸ ಮಾಡುವ ಅವಕಾಶ ದೊರೆತಿದೆ ಎಂದರು.

ನಿರ್ದೇಶಕರಾದ ಶಶಿಧರ ಶೆಟ್ಟಿ ಇನ್ನಂಜೆ, ಎಂಜಿನಿಯರ್ ಗೋಪಾಲ ಭಟ್, ಸುಧಾಕರ ಶೆಟ್ಟಿ ಉತ್ರಿಂಜೆ ಬೆಹರಿನ್, ಸತೀಶ್ಚಂದ್ರ ಶೆಟ್ಟಿ ಅಕ್ಕುಂಜೆ, ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮತ್ತಿತರರು ಇದ್ದರು.

ಸಭೆಯಲ್ಲಿ ಹಿರಿಯಡ್ಕ ಬಂಟರ ಸಂಘದ ನೂತನ ಅಧ್ಯಕ್ಷ ರವೀಂದ್ರನಾಥ ಹೆಗ್ಡೆ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ.ಚೇತನ್ ಶೆಟ್ಟಿ ಕೋವಾಡಿ, ಮೂಡಬಿದಿರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಯುವ ಸಮಿತಿಯ ಸಂಚಾಲಕ ಶಿಶಿರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತ್ರೈಮಾಸಿಕ ಲೆಕ್ಕಪತ್ರಗಳ ಮಂಡನೆ, ವರದಿ ವಾಚನ, ಲೆಕ್ಕಪತ್ರಗಳಿಗೆ ಮಂಜೂರಾತಿ, ಫಲಾನುಭವಿಗಳಿಗೆ ನೀಡಲ್ಪಟ್ಟ ಆರ್ಥಿಕ ಸಹಾಯಧನಕ್ಕೆ ಮಂಜೂರಾತಿ ಪಡೆಯಲಾಯಿತು. 30ನೇ ವಾರ್ಷಿಕ ಮಹಾಸಭೆಗೆ ದಿನ ನಿಗದಿಪಡಿಸಲಾಯಿತು.

ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಶೆಟ್ಟಿ ವಂದಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು. ಡಾ.ಪ್ರಿಯಾ ಶೆಟ್ಟಿ, ಡಾ.ಮಂಜುಳಾ ಶೆಟ್ಟಿ ನಿರ್ವಹಿಸಿದರು.