ವೈಯಕ್ತಿಕ ಪ್ರತಿಷ್ಠೆಗಾಗಿ ಬೀದಿಗೆ ಬಂದ ಬಸವ..!

| Published : Feb 24 2025, 12:31 AM IST

ವೈಯಕ್ತಿಕ ಪ್ರತಿಷ್ಠೆಗಾಗಿ ಬೀದಿಗೆ ಬಂದ ಬಸವ..!
Share this Article
  • FB
  • TW
  • Linkdin
  • Email

ಸಾರಾಂಶ

ವೈಯಕ್ತಿಕ ಪ್ರತಿಷ್ಠೆಗಾಗಿ ಮದ್ದೂರು ತಾಲೂಕಿನ ಪ್ರಸಿದ್ಧ ದೊಡ್ಡ ಅರಸಿನಕೆರೆ ಗ್ರಾಮದ ಸಣ್ಣಕ್ಕಿ ರಾಯ ದೇವಾಲಯದ ಬಸಪ್ಪ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಗೌಡ, ಬಸಪ್ಪನ ಮನೆ ನನಗೆ ಸೇರಿದ್ದು ಎಂದು ಬೀಗ ಜಡಿದಿರುವ ಪರಿಣಾಮ ಈ ದುಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭವಾರ್ತೆ ಕೆ.ಎಂ.ದೊಡ್ಡಿ

ವೈಯಕ್ತಿಕ ಪ್ರತಿಷ್ಠೆಗಾಗಿ ತಾಲೂಕಿನ ಪ್ರಸಿದ್ಧ ದೊಡ್ಡ ಅರಸಿನಕೆರೆ ಗ್ರಾಮದ ಸಣ್ಣಕ್ಕಿ ರಾಯ ದೇವಾಲಯದ ಬಸಪ್ಪ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ ಆಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಗೌಡ, ಬಸಪ್ಪನ ಮನೆ ನನಗೆ ಸೇರಿದ್ದು ಎಂದು ಬೀಗ ಜಡಿದಿರುವ ಪರಿಣಾಮ ಈ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಆರಂಭದಲ್ಲಿ ಸಣ್ಣಕ್ಕಿ ರಾಯಸ್ವಾಮಿ ಅಭಿವೃದ್ಧಿ ಟ್ರಸ್ಟ್‌ ರಚಿಸಿ, ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗಿತ್ತು. ದೇವಾಲಯದ ಬಸವ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದ ಹಿನ್ನೆಲೆಯಲ್ಲಿ ದಾನಿಯೊಬ್ಬರು ಬಸಪ್ಪನ ಮನೆ ನಿರ್ಮಾಣ ಮಾಡಲು ನಿವೇಶನ ನೀಡಿದ್ದರು. ಅದನ್ನು ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಗೌಡರ ಹೆಸರಿಗೆ ಖಾತೆ ಮಾಡಿಸಿದ್ದರು. ಕಾಲ ಕ್ರಮೇಣ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡಿದ ಪರಿಣಾಮ ಜಯಪ್ರಕಾಶ್ ಗೌಡ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ ಅವರು ಸೇರಿ ಬಸಪ್ಪನ ಮನೆಗೆ ಬೀಗ ಜಡಿದಿದ್ದರು. ಈ ಸಂಬಂಧ ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿ, ಬಸಪ್ಪನ ಮನೆಯನ್ನು ಗ್ರಾಮಸ್ಥರು ರಚಿಸಿಕೊಂಡಿರುವ ಸಣ್ಣಕ್ಕಿ ರಾಯಸ್ವಾಮಿ ಬಸಪ್ಪ ಸೇವಾ ಸಮಿತಿ ವಶಕ್ಕೆ ನೀಡಿ ಎಂಬುವುದು ಗ್ರಾಮಸ್ಥರ ವಾದವಾಗಿದೆ.

ಇಂದು ಬಸಪ್ಪ ಪೂಜಾ ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿತ್ತು. ಅದು ವಾಪಸ್ ಬರುವ ವೇಳೆಗೆ ಜಯಪ್ರಕಾಶ್ ಗೌಡ ಬಸಪ್ಪನ ಮನೆಗೆ ಬೀಗ ಹಾಕಿ ಮತ್ತೆ ಕಿರಿಕ್ ಶುರು ಮಾಡಿದ್ದಾರೆ. ಪರಿಣಾಮ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕಿರಿಕ್ ಯಾಕೆ?

ಬಸವನ ಮನೆ ವಿಚಾರದಲ್ಲಿ ಜಯಪ್ರಕಾಶ್ ಗೌಡ ಆರಂಭದಿಂದಲೂ ಕಿರಿಕ್ ಮಾಡುತ್ತಿರಲು ಕಾರಣ ಬಸವನನ್ನು ನೋಡಿಕೊಳ್ಳುವ ತಮ್ಮಯ್ಯ. ಅಂದರೆ, ತಮ್ಮಯ್ಯ ಅವರನ್ನು ಆ ಕೆಲಸದಿಂದ ತೆಗೆದು ಹಾಕಿ ಎಂದು ಜಯಪ್ರಕಾಶ್ ಗೌಡ ಪಟ್ಟು ಹಿಡಿದಿದ್ದಾರೆ. ಆದರೆ, ಇಡೀ ಗ್ರಾಮದ ಜನರು ತಮ್ಮಯ್ಯ ಪರ ನಿಂತಿದ್ದಾರೆ. ಪ್ರಸ್ತುತ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಜಯಪ್ರಕಾಶ್ ಗೌಡರ ಪ್ರತಿಷ್ಠೆಯಿಂದಾಗಿ ಬಸವ ಬೀದಿಯಲ್ಲಿ ನಿಲ್ಲುವ ಪರಿಸ್ತಿತಿ ನಿರ್ಮಾಣ ಆಗಿದೆ.