ಸಾರಾಂಶ
- ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜನೆ: ಡಾ.ಗುರುಬಸವ ಸ್ವಾಮೀಜಿ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.15ರಂದು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮವನ್ನು ಇಲ್ಲಿನ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ನುಡಿದರು.
ಶನಿವಾರ ನಗರದ ಶಿವಯೋಗಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶ್ರೀಗಳು, ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ಅಂದು ಬೆಳಗ್ಗೆ 11 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ವಚನ ಸಂವಾದ ಕಾರ್ಯಕ್ರಮವನ್ನು ಅಕ್ಕಮಹಾದೇವಿ ರಸ್ತೆಯ ಎವಿಕೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಪ್ರಾಚಾರ್ಯ ಡಾ.ಪ್ರಭಾಕರ್ ಲಕ್ಕೊಳ್, ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಿತಾ ದೊಡ್ಡ ಗೌಡರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು ಎಂದರು.ಸಂಜೆ 4.30 ಗಂಟೆಗೆ ಮೋತಿ ವೀರಪ್ಪ ಕಾಲೇಜಿನ (ಗುಂಡಿ ಸರ್ಕಲ್) ಆವರಣದಿಂದ ಕಾರ್ಯಕ್ರಮ ನಡೆಯುವ ಬಾಪೂಜಿ ಬ್ಯಾಂಕ್ ಸಮುದಾಯ ಭವನ ದವರೆಗೆ "ಸಾಮರಸ್ಯ ನಡಿಗೆ " ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಡಾ.ಬಸವಲಿಂಗ ಪಟ್ಟದೇವರು, ಡಂಬಳ ಗದುಗಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಕೂಡಲ ಸಂಗಮದ ಡಾ.ಗಂಗಾಮಾತಾಜಿ, ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ, ಪಾಂಡೊಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ, ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಅಣಬೇರು ರಾಜಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಿತಿ ಗೌರವಾಧ್ಯಕ್ಷ ಡಾ.ಅಥಣಿ ಎಸ್.ವೀರಣ್ಣ ಪಾಲ್ಗೊಳ್ಳಲಿದ್ದು, ಬಸವ ಬೆಳವಿ ಚರಂತೇಶ್ವರ ವಿರಕ್ತ ಮಠದ ಬಸವದೇವರು "ಶರಣರು ಆಶಾಪಾಶವರಹಿತರು " ವಿಷಯ ಕುರಿತು, ಕಲಬುರಗಿಯ ಚಿಂತಕಿ ಕೆ.ನೀಲಾ "ವ್ಯಕ್ತಿತ್ವ ವಿಕಸನದಲ್ಲಿ ವಚನಕಾರರ ಪಾತ್ರ " ವಿಷಯ ಕುರಿತು ಅನುಭಾವದ ನುಡಿಗಳನ್ನಾಡುವರು. ವಿವಿಧ ಮಠಾಧೀಶರುಗಳು, ಗಣ್ಯರು ಭಾಗವಹಿಸುವರು. ನಂತರ ಸಾಣೆಹಳ್ಳಿಯ ಶಿವಸಂಚಾರ ತಂಡದಿಂದ "ಜಂಗಮದಡೆಗೆ " ನಾಟಕ ಪ್ರದರ್ಶನ ನಂತರ ಮಹಾ ಪ್ರಸಾದ ಇರುತ್ತದೆ ಎಂದರು.ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ತತ್ವಗಳು ಸದಾ ಜೀವಂತ. ಸದಾ ಹಸಿರಾದ ಮರವಿದ್ದಂತೆ, ಬಸವ ಸಂಸ್ಕೃತಿ ತತ್ವಗಳು ಎಲ್ಲರನ್ನೂ ಅಪ್ಪಿಕೊಳ್ಳುವಂತಹವು. ಯುವ ಮನಸುಗಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ಈ ಬಸವ ಸಂಸ್ಕೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಸಮಿತಿ ಗೌರವಾಧ್ಯಕ್ಷ ಡಾ.ಅಥಣಿ ಎಸ್.ವೀರಣ್ಣ, ಉಪಾಧ್ಯಕ್ಷ ಎಂ.ಶಿವಕುಮಾರ, ಸಹ ಕಾರ್ಯದರ್ಶಿಗಳಾದ ಎಸ್.ಓಂಕಾರಪ್ಪ, ಸೋಗಿ ಶಾಂತಕುಮಾರ, ಹುಚ್ಚಪ್ಪ ಮೇಸ್ಟ್ರು, ವೀಣಾ ಮಂಜುನಾಥ, ವನಜಾ ಮಹಾಲಿಂಗಯ್ಯ ಇತರರು ಇದ್ದರು.- - -
(ಬಾಕ್ಸ್) * 500ಕ್ಕೂ ಅಧಿಕ ಮಠಾಧೀಶರು, 1 ಲಕ್ಷ ಬಸವ ಅನುಯಾಯಿಗಳು ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಉತ್ಸವವನ್ನು ಅರ್ಥಪೂರ್ಣವಾಗಿ ದೊಡ್ಡಮಟ್ಟದಲ್ಲಿ ಆಚರಿಸಲು ಎಲ್ಲೆಡೆ ಸಿದ್ಧತೆ ನಡೆಸಲಾಗಿದೆ. ಎಲ್ಲ ತಾಲೂಕುಗಳಲ್ಲಿಯೂ ಪ್ರಚಾರ ಕಾರ್ಯ ನಡೆದಿದೆ. ಅಭಿಯಾನಕ್ಕೆ ಸೆ.1ರಂದು ಬಸವನ ಬಾಗೇವಾಡಿಯಿಂದ ಚಾಲನೆ ನೀಡಲಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಬೆಳಗಾವಿ ಸೇರಿದಂತೆ ಎಲ್ಲೆಡೆ ಸಂಭ್ರಮದಿಂದ ಮಾಡಲಾಗಿದೆ. ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಸಮಾರೋಪ ನಡೆಯಲಿದೆ. ಸುಮಾರು 1 ಲಕ್ಷ ಬಸವಾನುಯಾಯಿಗಳು, 500ಕ್ಕೂ ಅಧಿಕ ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.- - -
-13ಕೆಡಿವಿಜಿ44: ಡಾ.ಗುರುಬಸವ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.