ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಸೆ. 6ರಂದು ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದು, ಸ್ವಾಗತಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿ ಮುಖಂಡ ಹಾಗೂ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ. ವಚನ ಸಾಹಿತ್ಯ ರಕ್ಷಿಸಲು ಹಾಗೂ ಪಸರಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನದ ಹಮ್ಮಿಕೊಳ್ಳಲಾಗಿದೆ. ರಥಯಾತ್ರೆಯನ್ನು ಸೆ. 6ರಂದು ಬೆಳಗ್ಗೆ 9.30ಕ್ಕೆ ನಗರದ ಮೋಕಾ ರಸ್ತೆಯಲ್ಲಿರುವ ಕೆಆರ್‌ಎಸ್ ಫಂಕ್ಷನ್ ಬಳಿ ಸ್ವಾಗತಿಸಲಾಗುವುದು. ಬಳಿಕ ಬೈಕ್ ರ್‍ಯಾಲಿ ಮೂಲಕ ಕೆಇಬಿ ವೃತ್ತ, ಕನಕದುರ್ಗಮ್ಮ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ವೃತ್ತ, ತೇರು ಬೀದಿ ಮಾರ್ಗವಾಗಿ ಗವಿಯಪ್ಪ ವೃತ್ತ (ಮೋತಿ ವೃತ್ತ)ವರೆಗೆ ಸಾಗಿ ವೃತ್ತದಲ್ಲಿನ ಬಸವ ಪ್ರತಿಮೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ಎಸ್ಪಿ ವೃತ್ತ ಮೂಲಕ ಪಾರ್ವತಿ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ಮೈದಾನದವರೆಗೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿದ್ಯಾಲಯದಲ್ಲಿ (ಎಎಸ್‌ಎಂ) ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ. ಬೈಲಹೊಂಗಲದ ಪ್ರೇಮಕ್ಕ ಅಂಗಡಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4ಕ್ಕೆ ಪಾರ್ವತಿ ನಗರದ ಕಪ್ಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಹೈಸ್ಕೂಲ್ ಮೈದಾನದಿಂದ ಬಸವ ವನವರೆಗೆ ರಥಯಾತ್ರೆಯೊಂದಿಗೆ ಬೃಹತ್ ಪಥ ಸಂಚಲನ ಜರುಗಲಿದೆ. ಬಸವವನದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8 ಗಂಟೆಗೆ ಶಿವಸಂಚಾರ ಸಾಣೇಹಳ್ಳಿ ತಂಡದಿಂದ ಜಂಗಮೆದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಮುಖಂಡ ಎನ್.ಜಿ. ಬಸವರಾಜ್, ಯೋಗಿರಾಜ್, ಲಿಂಗನಗೌಡ, ಗಂಗಾವತಿ ವೀರೇಶ ಇತರರಿದ್ದರು.