ಕೊಡ್ಲಿಪೇಟೆಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅದ್ದೂರಿ ಸ್ವಾಗತ

| Published : Sep 30 2025, 12:02 AM IST

ಕೊಡ್ಲಿಪೇಟೆಯಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅದ್ದೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಗುರು ಬಸವಣ್ಣನವರ ಆದರ್ಶ, ತತ್ವಗಳನ್ನು ನಾಡಿನ ಜನಮಾನಸಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಮಠಾಧಿಪತಿಗಳ ಒಕ್ಕೂಟ ಮಾಡುತ್ತಿದ್ದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿ ಹೇಳಿದರು.

ಕನ್ನಡ ಪ್ರಭ ವಾರ್ತೆ ಶನಿವಾರಸಂತೆ

ವಿಶ್ವ ಗುರು ಬಸವಣ್ಣನವರ ಆದರ್ಶ ಹಾಗೂ ತತ್ವಗಳನ್ನು ನಾಡಿನ ಜನಮಾನಸಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಮಠಾಧಿಪತಿಗಳ ಒಕ್ಕೂಟ ಮಾಡುತ್ತಿದ್ದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ ಎಂದು ಗದಗ ಜಿಲ್ಲೆಯ ಡಂಬಳದ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿ ಹೇಳಿದರು.

ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದರೆ ಸಾಲದು. ನಾಡಿನಾದ್ಯಂತ ಬಸವಣ್ಣನ ಆಶಯಗಳನ್ನು ಪ್ರಚಾರ ಪಡಿಸುವ ಕೆಲಸ ವಾಗಬೇಕಿದೆ. ಹೆಣ್ಣುಮಕ್ಕಳಿಗೆ ಪ್ರಜಾಸತ್ತಾತ್ಮಕ ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟ ಪರಿಣಾಮ ಹೆಣ್ಣುಮಕ್ಕಳು ಇಂದು ವಿಶ್ವವ್ಯಾಪಿ ಸಾಧನೆಯ ಶಿಖರವೇರಲು ಸಾಧ್ಯ ವಾಗಿದೆ. ಹೆಣ್ಣು ಮಕ್ಕಳಿಗೆ ಸಂಸ್ಕಾರಗಳನ್ನು ತಂದುಕೊಟ್ಟು, ಅವರಲ್ಲಿ ಸರ್ವ ಸಮಾನತೆಯ ಮೌಲ್ಯಗಳನ್ನು ತಂದು ಕೊಟ್ಟ ವಿಶ್ವಗುರು ಬಸವಣ್ಣ. ಸಮಾಜದಲ್ಲಿ ಮೇಲು ಕೀಳು ಭೇದಗಳನ್ನು ದೂರ ಮಾಡಿದ ಸತ್ಪುರುಷ ಎಂದರು.

ಬಸವೇಶ್ವರರ ಆದರ್ಶ ಗಳನ್ನು ಶಾಲಾ ಕಾಲೇಜುಗಳಲ್ಲಿ ಹಾಗೂ ಜನಮಾನಸದಲ್ಲಿ ಅರಿವು ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಶ್ರೀಗಳು ಹೇಳಿದರು.

ಸುಸಂಸ್ಕೃತ ಸಮಾಜ:

ಭಾಲ್ಕಿಯ ಹಿರೇಮಠ ಸಂಸ್ಥಾನ ಮಠದ ನಾಡೋಜ ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವ ಧರ್ಮ ಹಾಗೂ ಬಸವಣ್ಣನ ಆದರ್ಶಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಎಲ್ಲಾ ಜನ ಸಮುದಾಯ ಅಪ್ಪುವ ಹಗೂ ಒಪ್ಪುವ ವಿಶ್ವವ್ಯಾಪಿಯಾದ ವಿಚಾರವಿದು. ಬಸವಣ್ಣನ ಆದರ್ಶಗಳನ್ನು ಪಾಲಿಸುವವರು ಕಡ್ಡಾಯವಾಗಿ ಅಂಗದ ಮೇಲೆ ಲಿಂಗವನ್ನು ಧರಿಸಬೇಕು. ಇಂದಿನ ಮಕ್ಕಳು ಹಾಗೂ ತಾಯಂದಿರು ಮೊಬೈಲ್ ಗಳ ಬದಲು ವಚನ ಪುಸ್ತಕಗಳನ್ನು ಹಿಡಿದು ವಚನಗಳ ಸಾರವನ್ನು ಅರಿಯಲು ಶ್ರಮವಹಿಸಿದಲ್ಲಿ ಭವಿಷ್ಯದ ಸಮಾಜ ಸುಸಂಸ್ಕೃತ ಸಮಾಜವಾಗುತ್ತದೆ ಎಂದರು.

ಕೂಡಲ ಸಂಗಮದ ಬಸವಧರ್ಮ ಪೀಠದ ಮಾತೆ ಡಾ.ಮಾತೆ ಗಂಗಾಮಾತಾಜಿ ಮಾತನಾಡಿ, ವಚನಗಳ ಅಧ್ಯಯನ ಮನುಷ್ಯನನ್ನು ಪರಿಪೂರ್ಣ ಗೊಳಿಸುತ್ತದೆ. ದೈಹಿಕವಾಗಿ, ಮಾನಸಿಕವಾಗಿ, ಧಾರ್ಮಿಕವಾಗಿ ಆರೋಗ್ಯಗೊಳಿಸುವ ಸರ್ವಾಂಗ ಪರಿಪೂರ್ಣಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಮಾತ್ರವಿದೆ. ಹನ್ನೆರಡನೆಯ ಶತಮಾನದಲ್ಲಿ ಇದ್ದಂತಹ ಸಾಮಾಜಿಕ ಕ್ಷೋಭೆಗಳ ವಿರುದ್ಧ ಸಮರ ಸಾರಿದ ಬಸವಣ್ಣ, ಇವನಾರವ ಎನ್ನದೇ ಎಲ್ಲರನ್ನೂ ಇವ ನಮ್ಮವ ಎಂದರು.

ಸಕಲ ಜೀವಗಳಿಗೂ ಲೇಸನ್ನೇ ಬಯಸಿದವರು ಬಸವಣ್ಣ ಎಂದರು.

ವಿಶ್ವದ ಸಾಂಸ್ಕೃತಿಕ ನಾಯಕ:

ವಿರಾಜಪೇಟೆಯ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳಾಡಿ ಕನ್ನಡ ಭಾಷೆಗೆ ದೇವಭಾಷೆಯ ಸ್ವರೂಪ ತಂದು ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದ ಹಾಗೂ ಸಮ ಸಮಾಜ ಕಟ್ಟಿದ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ ಎಂದರು.

ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ನಾಡಿನಾದ್ಯಂತ ಬಸವ ಬೆಳಕಿನ ಕಿರಣಗಳನ್ನು ಸೂಸುವ ಮೂಲಕ ನಾಡನ್ನು ಶರಣ ಸಂಸ್ಕ್ರತಿಮಯ ಮಾಡುತ್ತಿರುವ ಮಠಾಧಿಪತಿಗಳ ಕೈಂಕರ್ಯ ಶ್ಲಾಘನೀಯ ವಾದುದು. ವಿಶ್ವ ಕಂಡ ಮಾನವತಾವಾದಿ ಬಸವಣ್ಣನ ಶ್ರೇಷ್ಠ ವಿಚಾರಧಾರೆಗಳ ಅರಿವು ಮೂಡಿಸಲು ಕೊಡಗು ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠವನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಕೌಲಗದ ಶ್ರೀ ವೀರಸಿದ್ದೇಶ್ವರ ದೇವರು, ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಬಿಲ್ವಮಠದ ಶ್ರೀ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿಯ ಶ್ರೀ ಶಿವಬಸವದೇವರು, ಬಸವಕಲ್ಯಾಣದ ಶ್ರೀ ಬಸವದೇವರು, ರಾಯಚೂರಿನ ಶ್ರೀ ವೀರಭದ್ರ ಶಾಸ್ತ್ರಿ, ಕೊಡಗು ಕನ್ನಡ ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್,

ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಮೂರ್ತಿ, ಕೋಶಾಧಿಕಾರಿ ಉದಯಕುಮಾರ್, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಎಸ್. ಮಂಜುಳಾ ಸುರೇಶ್, ಸಮಾಜದ ಪ್ರಮುಖ ರಾದ ರಾಜೇಶ್ವರಿ ನಾಗರಾಜು, ಮಮತಾ ಸತೀಶ್, ಉಪನ್ಯಾಸಕ ಎನ್.ಎಂ.ಚಂದ್ರಶೇಖರ್ ಸ್ವಾಗತಿಸಿದರು.

ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ವಂದಿಸಿದರು.